ಬೆಂಗಳೂರು : ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಕಾವೇರಿ ಕೊಳ್ಳದ ನದಿಗಳಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರುತ್ತಿದೆ. ಕಬಿನಿ, ಹಾರಂಗಿ ಭರ್ತಿಯಾಗಿದ್ದರೆ, ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 98 ಅಡಿಗಳಿಗೆ ಏರಿದೆ.

ಈ ಮಧ್ಯೆ, ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಶನಿವಾರ ತಡರಾತ್ರಿ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಮೂರು ವರ್ಷದ ಮಗು ಸೇರಿ ಮೂವರು ಮಣ್ಣಿನಡಿ ಸಮಾಧಿಯಾಗಿದ್ದಾರೆ. ಸಕಲೇಶಪುರ ಸಮೀಪದ ಎಡಕುಮೇರಿ ಬಳಿ ಗುಡ್ಡ ಕುಸಿದ ಪರಿಣಾಮ ಮಂಗಳೂರು-ಬೆಂಗಳೂರು ಸೇರಿ ಕೆಲ ರೈಲುಗಳ ಸಂಚಾರ ರದ್ದಾಗಿದೆ. ಈ ಮಧ್ಯೆ, ಬಂಟ್ವಾಳದಲ್ಲಿ ವ್ಯಕ್ತಿಯೊಬ್ಬರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆ ಸಾಗರ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ದಾಂಡೇಲಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

100 ಅಡಿಯತ್ತ ಕೆಆರ್‌ಎಸ್‌:

ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಭಗಂಡೇಶ್ವರ ದೇವಾಲಯದ ಎರಡನೇ ಮೆಟ್ಟಿಲವರೆಗೆ ಪ್ರವಾಹದ ನೀರು ನುಗ್ಗಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟ 2856.79 (ಗರಿಷ್ಠ 2859) ಅಡಿಗಳಿಗೆ ಏರಿದ್ದು, ಜಲಾಶಯದಿಂದ 14 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.


ಕೆಆರ್‌ಎಸ್‌ಗೆ ಎರಡೇ ದಿನದಲ್ಲಿ ಏಳು ಅಡಿಗಳಷ್ಟು ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟ 98 ಅಡಿಗಳಿಗೆ (ಗರಿಷ್ಠ 124.80) ಏರಿದೆ. ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ 9 ಸಾವಿರ ಕ್ಯುಸೆಕ್‌ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮಾರಧಾರಾ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ. ಇದೇ ವೇಳೆ, ಬಂಟ್ವಾಳ ತಾಲೂಕಿನ ರಾಯ್‌ ಗ್ರಾಮದಲ್ಲಿ ಜೀವನ್‌ ಪಿಂಟೊ (43) ಎಂಬುವರು ನಾಪತ್ತೆಯಾಗಿದ್ದು, ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗ ಜಿಲ್ಲೆ ಗಾಜನೂರಿನ ತುಂಗಾ ಜಲಾಶಯದಿಂದ 42 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1611.59 ಅಡಿಗಳಿಗೆ ಏರಿದೆ. ನದಿ ತೀರದ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ಸ್ನಾನಘಟ್ಟ ಮುಳುಗಡೆಯಾಗಿದೆ. ಶೃಂಗೇರಿಯಲ್ಲಿ ತುಂಗಾನದಿಯ ಪ್ರವಾಹ ಮಠದ ಭೋಜನಾ ಶಾಲೆಗೂ ನುಗ್ಗಿದೆ. ಪಟ್ಟಣದ ಗಾಂಧಿ ಮೈದಾನ ಜಲಾವೃತಗೊಂಡಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ 1.30 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಬೆಳಗಾವಿ ಜಿಲ್ಲೆಯ 6 ಸೇತುವೆಗಳು ಜಲಾವೃತಗೊಂಡಿವೆ. ಉಜನಿ ಜಲಾಶಯದಿಂದ ವಿಜಯಪುರ ಜಿಲ್ಲೆಯಲ್ಲಿನ ಭೀಮಾ ನದಿಗೆ 1.05 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ.

ಗುಡ್ಡ ಕುಸಿತದಿಂದ 3 ಸಾವು:

ಮಳೆಯಿಂದಾಗಿ ತೀರ್ಥಹಳ್ಳಿಯ ಇಂದಿರಾನಗರ ಬಡಾವಣೆಯಲ್ಲಿ ಶನಿವಾರ ತಡರಾತ್ರಿ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಮೂರು ವರ್ಷದ ಮಗು ಸೇರಿ ಮೂವರು ಮಣ್ಣಿನಡಿ ಸಮಾಧಿಯಾಗಿದ್ದಾರೆ. ಮೃತರನ್ನು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗಕ್ಕರಗೋಳ ಗ್ರಾಮದ ಮಲ್ಲಿಕಾರ್ಜುನ (35), ನಾಗವೇಣಿ (28) ಹಾಗೂ ಸಂತೋಷ್‌ (3) ಎಂದು ಗುರುತಿಸಲಾಗಿದೆ. ಈ ವೇಳೆ, ಹನುಮಂತ ಎಂಬುವರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಕಲೇಶಪುರ ಸಮೀಪ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಸಿರಿಬಾಗಿಲು ನಡುವೆ ಶನಿವಾರ ರಾತ್ರಿ ಮಣ್ಣು ಕುಸಿದಿದ್ದು, ಹಾಸನ ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಿದೆ. ಇದರಿಂದಾಗಿ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳ ಸಂಚಾರ ರದ್ದಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಪರೀಕ್ಷೆ ಬರೆಯಲು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಅಭ್ಯರ್ಥಿಗಳ ರೈಲು ಸುಬ್ರಹ್ಮಣ್ಯ ರೋಡ್‌ನಲ್ಲಿ ರದ್ದುಗೊಂಡಿದ್ದು, ಅವರಿಗೆ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ.

ಇದೇ ವೇಳೆ, ಗುಡ್ಡ ಕುಸಿತದಿಂದಾಗಿ ಚಿಕ್ಕಮಗಳೂರಿನ ಕಳಸ-ಹೊರನಾಡು-ಕೊಟ್ಟಿಗೆಹಾರ, ಶೃಂಗೇರಿ-ಕೊಪ್ಪ, ಶಿವಮೊಗ್ಗ-ಶೃಂಗೇರಿ, ಮಂಗಳೂರು-ಶೃಂಗೇರಿ, ಮಂಗಳೂರು ಸಮೀಪದ ಮಾಣಿ-ಮೈಸೂರು ಮಾರ್ಗಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ ಸಮೀಪದ ಪ್ರವಾಸಿ ತಾಣ ಸಿರೆಮನೆ ಫಾಲ್ಸ್‌ಗೆ ಹೋಗುವ ಮಾರ್ಗದಲ್ಲಿಯೂ ಗುಡ್ಡ ಕುಸಿತ ಉಂಟಾಗಿದೆ.

- ಕೊಡಗಿನಲ್ಲಿ ವರುಣನ ಆರ್ಭಟ: ಮೈದುಂಬಿದ ಕಾವೇರಿ । ಶತಕದತ್ತ ಕೆಆರ್‌ಎಸ್‌ ಮಟ್ಟ

- ಶೃಂಗೇರಿಯಲ್ಲಿ ಉಕ್ಕೇರಿದ ತುಂಗೆ: ಮಠದ ಭೋಜನಶಾಲೆಗೂ ನುಗ್ಗಿತು ಭಾರಿ ನೀರು

- ಕುಕ್ಕೆ ಸ್ನಾನಘಟ್ಟ ಮುಳುಗಡೆ । ಗುಡ್ಡ ಕುಸಿತ: ಮಂಗಳೂರಿಗೆ ರೈಲುಗಳ ಸಂಚಾರ ಸ್ತಬ್ಧ

- ಉತ್ತರ ಕರ್ನಾಟಕದಲ್ಲಿ ಮಳೆ ಇಲ್ಲದಿದ್ದರೂ ಮಹಾರಾಷ್ಟ್ರದಿಂದ ಭಾರಿ ಪ್ರಮಾಣದ ನೀರು

1. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶನಿವಾರ ತಡರಾತ್ರಿ ಗುಡ್ಡ ಕುಸಿದು 3 ವರ್ಷದ ಮಗು ಸೇರಿ ಮೂವರು ಸಮಾಧಿ

2. ಹಾಸನದ ಸಕಲೇಶಪುರದ ಎಡಕುಮೇರಿ ಬಳಿ ಗುಡ್ಡ ಕುಸಿದು ಮಂಗಳೂರು- ಬೆಂಗಳೂರು ರೈಲುಗಳ ಸಂಚಾರ ಸ್ತಬ್ಧ

3. ಕೊಡಗಿನಲ್ಲಿ ಮಳೆ ಅಬ್ಬರದಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ. ಹಾರಂಗಿ ಜಲಾಶಯಕ್ಕೆ ಭಾರಿ ನೀರು

4. ಮಹಾರಾಷ್ಟ್ರದಿಂದ ಕೃಷ್ಣಾ, ಭೀಮಾ ನದಿಗೆ 1.30 ಲಕ್ಷ ಕ್ಯುಸೆಕ್‌ ನೀರು. ಬೆಳಗಾವಿಯಲ್ಲಿ 6 ಸೇತುವೆಗಳು ಜಲಾವೃತ

5. ಸೋಮವಾರವೂ ಮಳೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸಾಗರ, ಜೋಯಿಡಾ, ದಾಂಡೇಲಿಯಲ್ಲಿ ಶಾಲಾ-ಕಾಲೇಜಿಗೆ ರಜೆ