ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಮಳೆ ಕೊಂಚ ಕಡಿಮೆಯಾಗಿದೆ. ಭಾಗಮಂಡಲದಲ್ಲಿ ಕಳೆದೆರಡು ದಿನಗಳಿಂದ ಭಾರಿಯಾಗಿದ್ದು, ಭಾನುವಾರ ಸಂಜೆ ವೇಳೆಗೆ ಮಳೆ ತಗ್ಗಿದೆ.
ಕಾವೇರಿ ನದಿ ಉಗಮ ಸ್ಥಳವಾದ ತಲಕಾವೇರಿ ಪ್ರದೇಶದಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ತೀರ್ಥರೂಪಿಣಿ ಮಾತೆ ಕಾವೇರಿ ಭಗಂಡೇಶ್ವರ ದೇವಾಲಯದ ಮುಂಭಾಗದ ಎರಡು ಮೆಟ್ಟಿಲುಗಳನ್ನು ಸ್ಪರ್ಶಿಸಿರುವ ಹಿನ್ನೆಲೆಯಲ್ಲಿ ಮಾತೆ ಕಾವೇರಿಗೆ ಪ್ರಧಾನ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.ಭಗಂಡೇಶ್ವರ ದೇವಾಲಯದ ಎರಡನೇ ಮೆಟ್ಟಿಲವರೆಗೆ ನುಗ್ಗಿರುವ ಪ್ರವಾಹದ ನೀರು ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯಕ್ಕೆ ಜಲದಿಗ್ಬಂಧನ ಉಂಟಾಗಿತ್ತು. ಎಲ್ಲ ವಾಹನಗಳು ಮೇಲ್ಸೇತುವೆ ಮೇಲೆ ಓಡಾಡುವಂತಾಯಿತು. ತ್ರಿವೇಣಿ ಸಂಗಮ ಸ್ನಾನಘಟ್ಟ ಸಮೀಪದಲ್ಲಿದ್ದ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿತ್ತು. ಪಿಂಡ ಪ್ರದಾನಕ್ಕೂ ಸಮಸ್ಯೆಯಾಯಿತು.14,470 ಕ್ಯೂಸೆಕ್ ನೀರು ಹೊರಕ್ಕೆ: ಹಾರಂಗಿ ಜಲಾಶಯದ ನೀರಿನ ಗರಿಷ್ಠ ಮಟ್ಟ 2859 ಅಡಿ (8.5) ಆಗಿದ್ದು ಭಾನುವಾರದ ನೀರಿನ ಮಟ್ಟ 2856.79 ಅಡಿ (7.75 ಟಿಎಂಸಿ) ಇತ್ತು. ಜಲಾಶಯಕ್ಕೆ ಒಳಹರಿವು 10430 ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನದಿಗೆ ಸುಮಾರು 14,470 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಭೂಕುಸಿತ ಉಂಟಾದ ಪರಿಣಾಮ ಮಡಿಕೇರಿ ತಾಲೂಕಿನ ಚೆತ್ತುಕಾಯ ಪಚ್ಚೆಪಿಲಾವು ರಸ್ತೆ ಬಂದ್ ಆಗಿತ್ತು. ರಾಧಾಕೃಷ್ಣ ಎಂಬುವರ ಮನೆ ಮುಂಭಾಗ ಭೂಕುಸಿತವಾಗಿದ್ದು, ಸಂಚಾರ ಬಂದ್ ಆಗಿ ಜನರ ಪರದಾಟ ನಡೆಸಿದರು. ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಮಡಿಕೇರಿ-ಮಂಗಳೂರು ಹೆದ್ದಾರಿ 275 ರಲ್ಲಿ ಕರ್ತೋಜಿ ಬಳಿ ಭೂಕುಸಿತ ಉಂಟಾಗಿತ್ತು. ಇದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕುಸಿದಿದ್ದ ಮಣ್ಣು ತೆರವು ಮಾಡುತ್ತಿರುವಾಗಲೇ ಟಿಪ್ಪರ್ ಮೇಲೆ ಮಣ್ಣು ಕುಸಿದು ಅನಾಹುತ ಸೃಷ್ಟಿಸಿತು. ನಂತರ ಜೆಸಿಬಿ ಬಳಸಿ ಮಣ್ಣು ಮರ ತೆರವು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ವಿರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಕಾವೇರಿ ನದಿ ವ್ಯಾಪ್ತಿಯಲ್ಲಿ ಕರಡಿಗೋಡು ಚಿಕ್ಕನಹಳ್ಳಿ ಸಂಪರ್ಕ ರಸ್ತೆ ಮುಳುಗಡೆಯಾಗಿದ್ದು, ಈ ರಸ್ತೆಯಲ್ಲಿ ತೆರಳದಂತೆ ಬ್ಯಾರಿಕೇಡ್ ಮತ್ತು ಸೂಚನಾ ಫಲಕ ಅಳವಡಿಸಿ ಬದಲಿ ರಸ್ತೆಯಲ್ಲಿ ತೆರಳುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.