ಖರ್ವಾ ಗ್ರಾಮದ ವಲ್ಕಿಯ ಸರ್ಕಾರಿ ಶಾಲೆಗೆ ಶಿಕ್ಷಕರ ನೇಮಕಕ್ಕೆ ಆಗ್ರಹ

| Published : Oct 22 2024, 12:12 AM IST

ಸಾರಾಂಶ

ಶಾಲೆಗೆ ಸೂಕ್ತ ಕಾಂಪೌಂಡ್, ಚರಂಡಿ, ಡೆಸ್ಕ್‌ ಅವಶ್ಯಕತೆ ಇದೆ. ಮುಖ್ಯವಾಗಿ ಎರಡು ಶಾಲೆಗೂ ಶಿಕ್ಷಕರ ಕೊರತೆ ಇದೆ.

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ವಲ್ಕಿಯ ಉರ್ದು ಹಿರಿಯ ಪ್ರಾಥಮಿಕ ಹಾಗೂ ಎಸ್‌ವಿ ಪ್ರೌಢಶಾಲೆಗೆ ಶಿಕ್ಷಕರ ಕೊರತೆ ಇದ್ದು, ಶೀಘ್ರವಾಗಿ ಶಿಕ್ಷಕರ ನೇಮಕ ಮಾಡಬೇಕೆಂದು ಇಲ್ಲಿನ ಶಿಕ್ಷಣಾಭಿಮಾನಿಗಳು ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಲೀಂ ಅಬ್ದುಲ್ಲಾ ಮುಲ್ಲಾ, ಜುಬೇರ್ ಹಸನ್ ಶರಿಫ್ ಶೇಖ್, ಉರ್ದು ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಫಜಲ್ ಅಬುಮಹಮದ್ ಫಕರ್ದಿ ಅವರು, ವಲ್ಕಿಯ ಉರ್ದು ಹಿರಿಯ ಪ್ರಾಥಮಿಕ ಹಾಗೂ ಎಸ್‌ವಿ ಪ್ರೌಢಶಾಲೆಯಿಂದ ಇದುವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸಿದ್ದಾರೆ.

ಕೇವಲ ವಲ್ಕಿ ಮಾತ್ರವಲ್ಲದೇ ಕಾಸರಕೋಡ್, ಉಪ್ಪೋಣಿ, ಅಳ್ಳಂಕಿ ಮತ್ತಿತರ ಭಾಗದಿಂದಲೂ ಇಲ್ಲಿನ ಶಾಲೆಯಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ನಡೆಸಿದ್ದಾರೆ. ಪ್ರಸ್ತುತ 60 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗದಲ್ಲಿದ್ದಾರೆ. ಶಾಲೆ ಶೈಕ್ಷಣಿಕವಾಗಿ ಇನ್ನಷ್ಟೂ ಪ್ರಗತಿ ಸಾಧಿಸಲು ಕೆಲವೊಂದು ಮೂಲ ಸೌಕರ್ಯಗಳ ಅವಶ್ಯಕತೆಯು ಇದೆ. ಶಿಕ್ಷಕರ ಕೊರತೆ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಸನಿಹದಲ್ಲೆ ಇದೆ. ಎರಡು ಶಾಲೆಗಳಿಗೆ ಸರ್ಕಾರದಿಂದ ನೇಮಕವಾದ ತಲಾ ಒಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ಎರಡು ಶಾಲೆಗಳಿಗೆ ತಲಾ ಮೂರು ಶಿಕ್ಷಕರ ಅವಶ್ಯಕತೆ ಇದೆ ಎಂದಿದ್ದಾರೆ.

ಶಾಲೆಗೆ ಸೂಕ್ತ ಕಾಂಪೌಂಡ್, ಚರಂಡಿ, ಡೆಸ್ಕ್‌ ಅವಶ್ಯಕತೆ ಇದೆ. ಮುಖ್ಯವಾಗಿ ಎರಡು ಶಾಲೆಗೂ ಶಿಕ್ಷಕರ ಕೊರತೆ ಇದೆ. ಬಿಇಒಗೆ ಈ ಬಗ್ಗೆ ಮನವಿ ನೀಡಲಾಗಿದ್ದರೂ ಇದುವರೆಗೆ ಶಿಕ್ಷಕರ ನೇಮಕವಾಗಿಲ್ಲ. ಪ್ರಾಥಮಿಕ ಶಾಲೆಯ ಚುನಾವಣಾ ಕೋಣೆ ಹಾಗೂ ಶಾಲೆಯ ಮೆಟ್ಟಿಲು, ಚಾವಣಿಯ ದುರಸ್ತಿ ಅವಶ್ಯಕತೆ ಇದೆ ಎಂದು ಸಮಸ್ಯೆ ತೆರೆದಿಟ್ಟಿದ್ದಾರೆ.

ಸಹಾಯಹಸ್ತ: ಊರಿನ ದಾನಿಗಳು, ಗಣ್ಯರು ಈ ಶಾಲೆ ಬಗ್ಗೆ ಕಾಳಜಿ ವಹಿಸಿ ತಮ್ಮ ಕೈಲಾದ ಸಹಾಯಹಸ್ತ ನೀಡಿದ್ದಾರೆ. ಕಾಸರಕೋಡ್‌ನಿಂದ ಬರುವ ವಿದ್ಯಾರ್ಥಿಗಳಿಗೆ ವಲ್ಕಿ ಜಮಾತ್ ವತಿಯಿಂದಲೇ ಶಾಲಾ ವಾಹನದ ಖರ್ಚುವೆಚ್ಚ, ಜತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಪೂರೈಕೆ ಮಾಡಿದ್ದಾರೆ‌. ಸರ್ಕಾರದ ನೆರವು ಕೂಡ ಅವಶ್ಯಕತೆ ಇದೆ ಎಂದು ಖರ್ವಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದರು.