ಹಾನಿಗೊಳಗಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಿ

| Published : Oct 22 2024, 12:11 AM IST / Updated: Oct 22 2024, 12:12 AM IST

ಸಾರಾಂಶ

ಮೇ 16ರಂದು ಹೊಸಪೇಟೆ ತಾಲೂಕಿನಲ್ಲಿ ಬಾಳೆ ತೋಟಗಳು ಗಾಳಿ, ಮಳೆಗೆ ನೆಲಕಚ್ಚಿದ್ದವು.

ಹೊಸಪೇಟೆ: ಈ ಬಾರಿ ಬೆಳೆ ಹಾನಿ ಸಮೀಕ್ಷೆಯನ್ನು ಜಿಲ್ಲೆಯಾದ್ಯಂತ ಕೈಗೊಳ್ಳಬೇಕು. ಮೇ ತಿಂಗಳಲ್ಲಿ ನೆಲಕಚ್ಚಿದ್ದ ಬಾಳೆ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಜೆ.ಕಾರ್ತಿಕ್‌ ಬಣ)ದ ಜಿಲ್ಲಾಧ್ಯಕ್ಷ ಜೆ.ಎನ್. ಕಾಳಿದಾಸ್‌ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 16ರಂದು ಹೊಸಪೇಟೆ ತಾಲೂಕಿನಲ್ಲಿ ಬಾಳೆ ತೋಟಗಳು ಗಾಳಿ, ಮಳೆಗೆ ನೆಲಕಚ್ಚಿದ್ದವು. ಈ ವೇಳೆ ಶಾಸಕ ಎಚ್‌.ಆರ್‌. ಗವಿಯಪ್ಪ ಮತ್ತು ತಹಸೀಲ್ದಾರ್‌ ಶೃತಿ ಎಂ.ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ನಯಾಪೈಸೆ ಪರಿಹಾರ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಕಾ ಸಮೀಕ್ಷೆ ನಡೆಸಲಿ:

ಕಳೆದ ಒಂದು ವಾರದಿಂದ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಮೆಕ್ಕೆಜೋಳ, ಭತ್ತ, ಜೋಳ, ಮೆಣಸಿನಕಾಯಿ, ಜೋಳ, ಹತ್ತಿ, ರಾಗಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. ಹಾಗಾಗಿ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಗೊಳಗಾದ ರೈತರ ಜಮೀನುಗಳಿಗೆ ತೆರಳಿ ಪಕ್ಕಾ ಸರ್ವೆ ನಡೆಸಬೇಕು. ಈಗ ಹರಪನಹಳ್ಳಿ ಹೊರತುಪಡಿಸಿ ಜಿಲ್ಲೆಯಲ್ಲಿ 127 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನಮ್ಮ ಪ್ರಕಾರ ಜಿಲ್ಲೆಯಲ್ಲಿ 400 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಜಮೀನುಗಳಿಗೆ ತೆರಳದೇ ಕಚೇರಿಗಳಲ್ಲಿ ಕುಳಿತು ಸಮೀಕ್ಷೆ ಅಂಕಿ-ಅಂಶ ನೀಡದೇ ವಾಸ್ತವದ ವರದಿ ನೀಡಿ ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್‌ ಅವಘಡ ತಪ್ಪಿಸಲು ಜೆಸ್ಕಾಂ ಇಲಾಖೆ ನಗರ, ಹಳ್ಳಿ, ಪಟ್ಟಣಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಬೇಕು. ಫೋನ್‌ ಕರೆ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹೊಸಪೇಟೆಯ ಎಪಿಎಂಸಿಯಲ್ಲಿ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜಿಲ್ಲೆಯ ರೈತರು ಬೇರೆ ಕಡೆ ಬೆಳೆಗಳನ್ನು ಮಾರಾಟ ಮಾಡಲು ತೆರಳುವಾಗ ಪೊಲೀಸರಿಗೂ ಮಾಮೂಲು ನೀಡುವ ಸ್ಥಿತಿ ಇದೆ. ಹಾಗಾಗಿ ರೈತರ ಉತ್ಪನ್ನಗಳಿಗೆ ಒಂದು ಕಡೆಯಲ್ಲಿ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಈ ನಡುವೆ ಮಾರಾಟ ಮಾಡಲು ತೆರಳುವಾಗ ರಸ್ತೆಯಲ್ಲಿ ರೈತರೇ ಪೊಲೀಸರಿಗೆ ಮಾಮೂಲು ನೀಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಹೊಸಪೇಟೆಯ ಎಪಿಎಂಸಿಯಲ್ಲೇ ಎಲ್ಲಾ ಬೆಳೆಗಳ ಖರೀದಿ ಕೇಂದ್ರ ತೆರೆಯಬೆಕು. ಇದರಿಂದ ಸಾಗಾಟ ವೆಚ್ಚವನ್ನು ತಪ್ಪಿಸಿದಂತಾಗಲಿದೆ. ರೈತರ ಸಮಸ್ಯೆಗಳಿಗೆ ಜಿಲ್ಲೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ರೀತಿಯಾದರೆ ರೈತರು ಯಾರ ಬಳಿ ಸಂಕಷ್ಟ ಹೇಳಿಕೊಂಡು ಹೋಗಬೇಕು ಎಂದರು.

ರೈತ ಮುಖಂಡರಾದ ಎಚ್‌.ಜಿ. ಮಲ್ಲಿಕಾರ್ಜುನ, ಹೇಮರೆಡ್ಡಿ, ಕೆ.ಎಚ್‌. ಮಹಾಂತೇಶ್, ಎಲ್‌.ಎಸ್‌. ರುದ್ರಪ್ಪ, ಜ್ಯೋತಿ ಕೊಟ್ರಪ್ಪ, ನಲ್ಲಾಪುರ ಹನುಮಂತಪ್ಪ ಮತ್ತಿತರರಿದ್ದರು.