ಕುದರಿಮೋತಿಯಲ್ಲಿ ಬಾರ್ ಲೈಸನ್ಸ್ ರದ್ದತಿಗೆ ಆಗ್ರಹ

| Published : Dec 18 2023, 02:00 AM IST

ಸಾರಾಂಶ

ಬಾರ್ ಆರಂಭವಾದರೆ ಮದ್ಯ ಸೇವನೆ ಹೆಚ್ಚಾಗುತ್ತದೆ. ಇದರಿಂದ ಬಡವರ್ಗದ ಜನರಿಗೆ ತೊಂದರೆ ಆಗುತ್ತದೆ. ಮದ್ಯ ಸೇವನೆಗೆ ಜನರು ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಾರೆ. ದುಡಿದ ಹಣವನ್ನೆಲ್ಲ ಕುಡಿಯಲು ಬಳಸುತ್ತಾರೆ. ಇನ್ನು ಕೆಲವರು ಸಾಲ ಮಾಡಿ ಹಾಳಾಗುತ್ತಾರೆ.

ಕುಕನೂರು: ತಾಲೂಕಿನ ಕುದರಿಮೋತಿಯಲ್ಲಿ ಮದ್ಯದ ಅಂಗಡಿಯ ಲೈಸನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ಮೈಸೂರು ಸಂಸ್ಥಾನ ಮಠದ ವಿಜಯಮಹಾಂತೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಗ್ರಾಮದ ಕುಷ್ಟಗಿ-ಕೊಪ್ಪಳ ರಸ್ತೆಯ ಮಧ್ಯೆದಲ್ಲಿ ಕುಳಿತು ಗ್ರಾಮಕ್ಕೆ ಮದ್ಯದ ಅಂಗಡಿ ಪರವಾನಗಿ ಬೇಡ ಎಂದು ಆಗ್ರಹಿಸಿದರು.ವಿಜಯಮಹಾಂತೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ಬಾರ್ ಆರಂಭವಾದರೆ ಮದ್ಯ ಸೇವನೆ ಹೆಚ್ಚಾಗುತ್ತದೆ. ಇದರಿಂದ ಬಡವರ್ಗದ ಜನರಿಗೆ ತೊಂದರೆ ಆಗುತ್ತದೆ. ಮದ್ಯ ಸೇವನೆಗೆ ಜನರು ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಾರೆ. ದುಡಿದ ಹಣವನ್ನೆಲ್ಲ ಕುಡಿಯಲು ಬಳಸುತ್ತಾರೆ. ಇನ್ನು ಕೆಲವರು ಸಾಲ ಮಾಡಿ ಹಾಳಾಗುತ್ತಾರೆ. ಮಹಿಳೆಯರು ನಿತ್ಯ ಕುಡುಕ ಗಂಡಂದಿರಿಂದ ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ. ಹಾಗಾಗಿ ಗ್ರಾಮಕ್ಕೆ ಮದ್ಯದ ಅಂಗಡಿ ಬೇಡ ಎಂದರು.ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಗ್ರಾಮಸ್ಥರು ಸೇರಿದ್ದರು. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಕೆಲವೊತ್ತು ಸಂಚಾರಕ್ಕೆ ತಡೆ ಆಗಿದ್ದರಿಂದ ಟ್ರಾಫಿಕ್ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸುವ ಕಾರ್ಯ ಮಾಡಿದರು. ವಾಹನ ಸಂಚಾರಕ್ಕೆ ಅನುವು ಮಾಡುವಂತೆ ಕೇಳಿಕೊಂಡರು. ಕೆಲವೊತ್ತು ಗ್ರಾಮಸ್ಥರು ಒಪ್ಪದೇ ಪ್ರತಿಭಟನೆ ಮುಂದುವರೆಸಿದರು. ಈ ಮಧ್ಯೆ ಪೊಲೀಸರಿಗೂ ಜನರಿಗೆ ಮಾತಿನ ಚಕಮಕಿ ನಡೆಯಿತು. ನಮ್ಮೂರಿಗೆ ಬಾರ್ ಲೈಸೆನ್ಸ್ ಬೇಡವೇ ಬೇಡ ಎಂದು ಜನರು ಘೋಷಣೆ ಕೂಗಿದರು. ಗ್ರಾಮದ ಮುಖಂಡರು, ಮಹಿಳೆಯರು ಇದ್ದರು.