ಸಾರಾಂಶ
ಧಾರವಾಡ:
ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವಚನ ದರ್ಶನ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದ, ಉಪನಿಷತ್ತು ಹಾಗೂ ಆಗಮಗಳ ಆಧಾರದಡಿ ವಚನ ಸಾಹಿತ್ಯ ರಚಿಸಲ್ಪಟ್ಟ ಬಗ್ಗೆ ತಪ್ಪು ಸಂದೇಶ ಈ ''''''''ವಚನ ದರ್ಶನ'''''''' ಕೃತಿ ಬಿಂಬಿಸುತ್ತಿದೆ. ವಚನ ಚಳವಳಿ ಪೌರೋಹಿತ್ಯ, ಗುಡಿ-ಗುಂಡಾರ ಸಂಸ್ಕೃತಿಯ ವಿರೋಧಿ. ಆದರೆ, ವೈಧಿಕ ಧರ್ಮ, ಸನಾತನ ಪರಂಪರೆಯ ವಿರೋಧ ಅಲ್ಲ ಎಂದು ಸ್ಪಷ್ಟಪಡಿದ ಡಾ. ಶಶಿಕಾಂತ, ಕೃತಿಯಲ್ಲಿ ವಚನ ಸಾಹಿತ್ಯ ತಿರುಚಿರುವ ಬಗ್ಗೆ ದೂರಿದರು. ಕೃತಿಯಲ್ಲಿ ಲಿಂಗಾಯತ ಧರ್ಮ ವೇದದ ವಿಕಾಸ ಎಂದು ತಪ್ಪು ಸಂದೇಶ ಸಾರಿದೆ. ಜನರ ದಿಕ್ಕು ತಪ್ಪಿಸುವುದು ನಿಲ್ಲಿಸಬೇಕು. ವಚನ ಸಾಹಿತ್ಯದ ಮೇಲೆ ಕಣ್ಣಿಟ್ಟು, ನಮ್ಮ ಭಾವನೆ, ಸಿದ್ಧಾಂತಕ್ಕೆ ಧಕ್ಕೆ ತರಬಾರದು ಎಂದು ಮನವಿ ಮಾಡಿದರು.
ಲಿಂಗಾಯತ ದಮನಿತರ, ಕಾರ್ಮಿಕರ, ಕಾಯಕ ಯೋಗಿಗಳ ಧರ್ಮ. ಈ ಶರಣ ಸಮಾಜಕ್ಕೆ ವಿಷ ಉಣಿಸುವ ಕೆಲಸ ಮಾಡಬಾರದು. ನಮ್ಮ ಧರ್ಮ, ಚಳವಳಿ, ಸಂಸ್ಕೃತಿ ಬಗ್ಗೆ ಟೀಕಿಸುವ ಹಕ್ಕು ವೈದಿಕ ಶಾಹಿಗಳಿಗೆ ಇಲ್ಲ ಎಂದು ಕಿಡಿಕಾರಿದರು.ನಾವು ಹಿಂದು ಸಂಸ್ಕೃತಿ ಒಪ್ಪಿದ್ದೇವೆ. ಆದರೆ, ಶರಣರ ಧರ್ಮ, ವಚನ ಸಾಹಿತ್ಯ ರಾಜಕೀಯಕ್ಕೆ ಬಳಕೆ ಖಂಡಿಸುತ್ತವೆ. ಜೈನ, ಬೌದ್ಧ, ಸಿಖ್ ಮತ್ತು ಮುಸ್ಲಿಂ ಅಲ್ಪಸಂಖ್ಯಾತರಿಗೆ ನೀಡಿದ ಧಾರ್ಮಿಕ ಮಾನ್ಯತೆ ಲಿಂಗಾಯತರಿಗೆ ನೀಡಲು ಒತ್ತಾಯಿಸಿದರು.
ಸಂಗಮೇಶ ಸವದತ್ತಿಮಠ, ವೀಣಾ ಬನ್ನಂಜೆ ಅಂತಹ ಸಾಹಿತಿಗಳೇ ವಚನ ದರ್ಶನ ಕೃತಿಯಲ್ಲಿ ತಪ್ಪು ಸಂದೇಶ ಸಾರಿರುವುದು ಸರಿಯಲ್ಲ. ಈ ಕೃತಿಯಲ್ಲಿ ವೈಧಿಕ ಧರ್ಮದ ಅಜೇಂಡಾ ತರುವ ಪ್ರಯತ್ನ ನಡೆಸಿದ್ದಾರೆ ಎಂದು ಆಪಾದಿಸಿದರು.ಸರ್ಕಾರ ಸ್ವಯಂ ದೂರು ದಾಖಲಿಸಿಕೊಂಡು, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ವಚನ ದರ್ಶನ ಕೃತಿ ಮುಟ್ಟುಗೋಲು ಹಾಕಿಕೊಳ್ಳಲು ಆಗ್ರಹಿಸಿದ ಡಾ. ಶಶಿಕಾಂತ, ಈ ಬಗ್ಗೆ ಆ. 22ಕ್ಕೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ, ನಿವೃತ್ತ ಅಧಿಕಾರಿ ಜಿ.ವಿ. ಕೊಂಗವಾಡ, ಶೇಖರ ಕುಂದಗೋಳ, ಉಮೇಶ ಕಟಗಿ, ಎಂ.ಎಸ್. ಶಿರಿಯಣ್ಣವರ, ಶಿವರುದ್ರಗೌಡ ಕುಂದರಗಿ, ಜಯಶ್ರೀ ಪಾಟೀಲ ಇದ್ದರು.