ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ಸಮೀಕ್ಷೆ ಅವಧಿ ವಿಸ್ತರಣೆಗೆ ಆಗ್ರಹ

| Published : Oct 29 2024, 12:45 AM IST

ಸಾರಾಂಶ

ಪರಿಶಿಷ್ಟ ಜಾತಿ, ಆದಿ ದ್ರಾವಿಡ ಸಮುದಾಯವು ಅರುಂಧತಿಯರ ಜಾತಿಗೆ ಸೇರಿದೆ. ಇವರು ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ವೃತ್ತಿಯಲ್ಲಿ ತೊಡಗಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹೀಗೆ ಹಲವು ವರ್ಷಗಳಿಂದ ಮಲದ ಗುಂಡಿ, ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾ ಬಂದಿರುವ ಕುಟುಂಬಗಳನ್ನು ನಿರ್ಲಕ್ಷ್ಯ ಮಾಡುವುದನ್ನು ಬಿಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಸಮೀಕ್ಷೆ ಸರಿಯಾಗಿ ಮಾಡಿಲ್ಲವಾದ್ದರಿಂದ ಸಮರ್ಪಕವಾಗಿ ಮಾಹಿತಿ ನೀಡಿ ಸರ್ವೆ ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯರ್ ಪೌರಕಾರ್ಮಿಕ ಮಹಾಸಭಾ ಸಂಘಟನೆ ಕಾರ್ಯಕರ್ತರು ನಗರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಎದುರು ಸೇರಿದ ಸಂಘಟನೆಯ ಕಾರ್ಯಕರ್ತರು ಹಲವು ಬೇಡಿಕೆಗಳ ಕುರಿತಂತೆ ಘೋಷಣೆ ಕೂಗಿ ಸರ್ಕಾರವನ್ನು ಆಗ್ರಹಪಡಿಸಿದರು.

ಪರಿಶಿಷ್ಟ ಜಾತಿ, ಆದಿ ದ್ರಾವಿಡ ಸಮುದಾಯವು ಅರುಂಧತಿಯರ ಜಾತಿಗೆ ಸೇರಿದೆ. ಇವರು ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ವೃತ್ತಿಯಲ್ಲಿ ತೊಡಗಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹೀಗೆ ಹಲವು ವರ್ಷಗಳಿಂದ ಮಲದ ಗುಂಡಿ, ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾ ಬಂದಿರುವ ಕುಟುಂಬಗಳನ್ನು ನಿರ್ಲಕ್ಷ್ಯ ಮಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಇಂತಹ ಕುಟುಂಬಗಳಿಗೆ ಸಮೀಕ್ಷೆ ಮಾಡಲು 2021ನೇ ವರ್ಷದಲ್ಲಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಸಮೀಕ್ಷೆ ಕಾರ್ಯದ ಮಾಹಿತಿ ಸರಿಯಾಗಿ ಗೊತ್ತಿಲ್ಲದೆ ಅವಕಾಶ ವಂಚಿತರಾಗಿರುವುದರಿಂದ ಹಲವು ಯೋಜನೆಗಳು ಕೈತಪ್ಪಿವೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯು ಸಮರ್ಪಕವಾಗಿ ನಮಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾ ಸಭಾದ ಕಾರ್ಯದರ್ಶಿ ಬಾಬು ಮಾತನಾಡಿ, ಮತ್ತೊಮ್ಮೆ ಪ್ರತಿ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ ಮನೆಗಳಿಗೆ ಪ್ರಚಾರ ಮಾಡಿ ಮಾಹಿತಿ ನೀಡಲು ಅವಕಾಶ ಮಾಡಿಕೊಡಬೇಕು. ಹಾಗಾಗಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುಟುಂಬದವರೆಂದು ಪರಿಗಣಿಸುವ ಮೂಲಕ ನಮಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಅಗತ್ಯ ದಾಖಲೆಗಳನ್ನು ನೀಡುವುದಕ್ಕಾಗಿ ಅವರಿಗೆ ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಾಸಭಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ನಾಗಮಣಿ, ಮುಖಂಡರಾದ ರೂಪಾ ದೇವಿ, ಮಂಗಳಾಗೌರಿ, ಮಾದಮ್ಮ ಭಾಗವಹಿಸಿದ್ದರು.