ಸಾರಾಂಶ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಮುಡಾದ ನಾಲ್ಕು ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣೆ ನಡೆಸುವ ಮೂಲಕ ತನಿಖೆ ಚುರುಕುಗೊಳಿಸಿದ್ದಾರೆ.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಮುಡಾದ ನಾಲ್ಕು ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣೆ ನಡೆಸುವ ಮೂಲಕ ತನಿಖೆ ಚುರುಕುಗೊಳಿಸಿದ್ದಾರೆ.
ಇ.ಡಿ.ನೋಟಿಸ್ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿರುವ ಇ.ಡಿ.ಕಚೇರಿಗೆ ತೆರಳಿದ್ದ ಮುಡಾ ವಿಶೇಷ ತಹಸೀಲ್ದಾರ್ ರಾಜಶೇಖರ್, ವಿಶೇಷ ಭೂ ಸ್ವಾಧೀನಾಧಿಕಾರಿ ಶ್ರುತಿ, ಹಿಂದಿನ ಆಯುಕ್ತರ ಆಪ್ತ ಕಾರ್ಯದರ್ಶಿ ಪ್ರಶಾಂತ್, ಬೆರಳಚ್ಚುಗಾರ ಚಂದ್ರು ಅವರನ್ನು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಇ.ಡಿ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದಿದ್ದಾರೆ.
ಇನ್ನು ಮುಡಾ ಎಂಜಿನಿಯರ್‌ಗಳಾದ ಆರ್.ಶ್ರೀನಿವಾಸ್, ರಾಜಶೇಖರ್, ರೆಕಾರ್ಡ್ ರೂಂ ಸಿಬ್ಬಂದಿ ರವಿ ಸೇರಿ ಉಳಿದ 4 ಮಂದಿಗೆ ವಿಚಾರಣೆಗೆ ಬರುವಂತೆ ಇ.ಡಿ.ನೋಟಿಸ್ ನೀಡಿದ್ದು, ಅವರು ಸೋಮವಾರ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಆರ್‌ಟಿಐ ಕಾರ್ಯಕರ್ತ ಗಂಗರಾಜು ಸೋಮವಾರ ಇ.ಡಿ. ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಇಂದು ಗಂಗರಾಜು ವಿಚಾರಣೆ: ನಾನು ಸೋಮವಾರ ಇ.ಡಿ.ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಯಾವ ವಿಚಾರವಾಗಿ ತನಿಖೆಗೆ ಕರೆದಿದೆಯೋ ಗೊತ್ತಿಲ್ಲ. ಮುಖ್ಯಮಂತ್ರಿ ಪತ್ನಿಗೆ ಸೇರಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೇಳಿದರೆ ಕೊಡುತ್ತೇನೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ತಿಳಿಸಿದ್ದಾರೆ.
ಮುಡಾದಲ್ಲಿ 50:50 ಅನುಪಾತದಡಿ 2 ಸಾವಿರ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಇ.ಡಿ. ತನಿಖೆ ಮಾಡಿದರೆ ಬೇನಾಮಿಯಾಗಿ ಯಾರೆಲ್ಲ ಆಸ್ತಿ ಮಾಡಿದ್ದಾರೆ ತಿಳಿಯಲಿದೆ. ಕೆಸರೆ ಗ್ರಾಮದ ಭೂ ವಿವಾದಕ್ಕೆ ಸಂಬಂಧಿಸಿ ಸಾಕಷ್ಟು ಅಕ್ರಮಗಳ ದಾಖಲೆ ನನ್ನ ಬಳಿ ಇದೆ. ಲೋಕಾಯುಕ್ತ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ. ಇ.ಡಿ. ಅಧಿಕಾರಿಗಳು ತನಿಖೆ ಮಾಡುತ್ತಿರುವುದಿರಂದ ಪ್ರಕರಣ ತಾರ್ತಿಕ ಅಂತ್ಯಕ್ಕೆ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.