ಶಾಸಕ ಎಚ್.ಡಿ. ತಮ್ಮಯ್ಯ । ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಇತ್ತೀಚೆಗೆ ಬೆಳಕಿಗೆ ಬಂದಿರುವ ಅಕ್ರಮ ಹಣ ವರ್ಗಾವಣೆ ಹಾಗೂ ಸೈಬರ್ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಅಮಾಯಕರ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ಜಮೆ ಮಾಡಿ ಬಳಿಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆಸಿರುವ ಕುರಿತು ಹಲವು ದೂರುಗಳು ಬಂದಿರು ವುದಾಗಿ ಉಲ್ಲೇಖಿಸಿದ್ದಾರೆ. ಇಂತಹ ಕೃತ್ಯಗಳಿಂದ ನಿರಪರಾಧಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ನಿರಪರಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕಾನೂನು ಪ್ರಕ್ರಿಯೆ ನಡೆಸಬೇಕು. ಜೊತೆಗೆ ಸೈಬರ್ ಅಪರಾಧಿಗಳು ಹಾಗೂ ವಂಚಕರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಂತೆ ಪೊಲೀಸ್ ಇಲಾಖೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಒತ್ತಾಯಿಸಿದ್ದಾರೆ.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್‌.ಡಿ.ತಮ್ಮಯ್ಯ ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್‌ಗಳು ಯಾರ ಹಿಂಬಾಲಕರು ಎಂಬುದು ಜಗಜ್ಜಾಹೀರಾಗಿದೆ. ತನಿಖೆಗೆ ಹಾಜರಾಗಿದ್ದವರೆಲ್ಲಾ ಇಂದು ಫ್ಲೆಕ್ಸ್ ನಲ್ಲಿ ಫೋಟೋ ಹಾಕಿಕೊಂಡಿ ದ್ದಾರೆ. ಅವರೊಂದಿಗೆ ಇವರನ್ನು ಸಹ ಮತ್ತೊಮ್ಮೆ ತನಿಖೆಗೆ ಒಳಪಡಿಸಬೇಕೆಂದು ಪತ್ರ ಬರೆಯಬೇಕಾಗುತ್ತದೆ. ನಾನು ಯಾರ ಮೇಲೂ ಸುಮ್ಮನೆ ಆರೋಪ ಮಾಡುವುದಿಲ್ಲ, ತಪ್ಪಿತಸ್ಥರು ಯಾರಿದ್ದಾರೋ ತನಿಖೆ ಮಾಡಿ ಎಂದು ಹೇಳುತ್ತೇನೆ ಎಂದರು. ಅಮಾಯಕ ಬಡವರ ಖಾತೆಗೆ ಹಣ ಹಾಕಿ ಮತ್ತೆ ವಾಪಸ್ ಪಡೆಯಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾತನಾಡಿ, ಯಾರೂ ತಪ್ಪು ಮಾಡಿದರೂ ಕೂಡಲೇ ಬಂಧಿಸುವಂತೆ ಸೂಚನೆ ನೀಡಿದ್ದೆ, ಅದಕ್ಕೆ ಪೂರಕವಾಗಿ ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಬಡವರ ಖಾತೆಗೆ ಯಾವ ರೂಪದಲ್ಲಿ ಹಣ ಹಾಕಿದ್ದಾರೋ ಗೊತ್ತಿಲ್ಲ. ಅದೆಲ್ಲಾ ತನಿಖೆಯಿಂದ ಹೊರಗೆ ಬರಬೇಕು. ಅಮಾಯ ಕರು ಟ್ಯಾಕ್ಸ್ ಕಟ್ಟಬೇಕೆಂದು ಬಂದರೆ ಅವರ ಗತಿ ಏನು. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಇದರ ಹಿಂದೆ ಯಾರೇ ಇರಲಿ, ಯಾವ ಪಕ್ಷದವರೇ ಆಗಿರಲಿ ಅವರನ್ನು ಬಂಧಿಸಿ ಬಡವರಿಗೆ ನ್ಯಾಯ ಒದಗಿಸಬೇಕೆಂದು ಪೊಲೀಸ್ ಮುಖ್ಯ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಸಂಬಂಧ ಇಂದು ಮನವಿ ಸಲ್ಲಿಸಲಾಗಿದೆ ಎಂದರು.ಕೆಲವರಿಗೆ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಏನೂ ಮಾಡಲಾಗುವುದಿಲ್ಲ. ಹೊಟ್ಟೆ ನೋವಿಗೆ ಔಷಧಿ ಕೊಡಲು ವೈದ್ಯರಿದ್ದಾರೆ. ಆದರೆ, ಹೊಟ್ಟೆ ಕಿಚ್ಚಿಗೆ ಔಷಧಿ ಕೊಡಲು ಪ್ರಪಂಚದಲ್ಲಿ ವೈದ್ಯರು ಹುಟ್ಟಿಲ್ಲ. ಹಾಗಾಗಿ ಹೊಟ್ಟೆ ಕಿಚ್ಚು ಪಡುವವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಫೋಟೋ

ಶಾಸಕ ಎಚ್‌.ಡಿ.ತಮ್ಮಯ್ಯ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ದಯಾಮ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.-- ಕೋಟ್‌ --

ಕ್ರಿಕೆಟ್ ಬೆಟ್ಟಿಂಗ್ ಕಿಂಗ್ ಪಿನ್‌ಗಳು ಯಾರ್‍ಯಾರು, ಅವರೆಲ್ಲರೂ ಯಾರ ಮನೆಯಲ್ಲಿದ್ದವರು. ಬೆಟ್ಟಿಂಗ್ ದುಡ್ಡಲ್ಲಿ ಇವರು ಎಲೆಕ್ಷನ್ ಮಾಡಿದ್ದಾರೆ. ಕಿಂಗ್ ಪಿನ್‌ಗಳು ಯಾರ್‍ಯಾರು ಇದ್ದಾರೋ ಅವರು ಸಿಐಡಿ ತನಿಖೆಗೆ ಹೋಗಿ ತಪ್ಪು ಒಪ್ಪಿಕೊಂಡು ಬಂದಿದ್ದಾರೆ, ಯಾರನ್ನು ಮುಚ್ಚಿ ಹಾಕಿದ್ದರು ಎಲ್ಲದೂ ಗೊತ್ತಿದೆ.

-ಎಚ್.ಡಿ. ತಮ್ಮಯ್ಯ, ಶಾಸಕ, ಚಿಕ್ಕಮಗಳೂರು