ಸಾರಾಂಶ
ರಾಣಿಬೆನ್ನೂರು: ಹುಬ್ಬಳ್ಳಿಯಲ್ಲಿ ಕಾಲೇಜ್ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಹಾಗೂ ಸೌಜನ್ಯ, ರುಕ್ಸಾನಾ, ದಾನಮ್ಮ ಸೇರಿದಂತೆ ಕೊಲೆ, ಅತ್ಯಾಚಾರ, ದೌರ್ಜನ್ಯ, ಹತ್ಯೆಗೀಡಾದವರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ನಗರದ ಬಸ್ ನಿಲ್ದಾಣದ ಬಳಿ ಎಸ್‌ಎಫ್‌ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟಿಸಿ ತಹಸೀಲ್ದಾರ್ ಟಿ. ಸುರೇಶಕುಮಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಬಸ್ ನಿಲ್ದಾಣದವರೆಗೆ ಸಾಗಿ ನಂತರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಕೊಲೆ ಖಂಡನಾರ್ಹ. ಇಂತಹ ಕೊಲೆಗಳನ್ನು ಮತೀಯ ಕನ್ನಡಕದ ಮೂಲಕ ನೋಡುವ, ರಾಜಕೀಯವಾಗಿ ಬಳಸಿಕೊಳ್ಳುವ ನೀಚತನ, ಷಡ್ಯಂತ್ರಕ್ಕೆ ಜನತೆ ಆಸ್ಪದ ಕೊಡಬಾರದು. ಎಲ್ಲರೂ ಒಂದಾಗಿ ನಿಂತು ಇಂತಹ ಸ್ಥಿತಿಯ ವಿರುದ್ದ ಧ್ವನಿ ಎತ್ತಬೇಕು. ರಾಜ್ಯ ಸರ್ಕಾರ ನರಹಂತಕ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆದರೆ ಇದನ್ನು ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಶಾಲಾ-ಕಾಲೇಜ್ ಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಗಳನ್ನು ನಡೆಸಬೇಕು, ಮಹಿಳೆಯರು ರಕ್ಷಣೆ ಹಾಗೂ ಭದ್ರತೆಗಾಗಿ ಮಹಿಳಾ ಕಾನೂನುಗಳನ್ನು ಸಮರ್ಪಕವಾಗಿ ಜಾರಿಮಾಡಬೇಕು. ರಾಜ್ಯ ಸರ್ಕಾರ ನೇಹಾ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದ್ದು ಸ್ವಾಗತಾರ್ಹವಾಗಿದ್ದು ಇದೇ ರೀತಿ ಸೌಜನ್ಯ, ದಾನಮ್ಮ, ರುಕ್ಸಾನಾ, ಅನುಶ್ರೀ ಸೇರಿದಂತೆ ದೌರ್ಜನ್ಯ, ಕೊಲೆ, ಅತ್ಯಾಚಾರ, ಹತ್ಯೆಗೀಡಾದ ಪ್ರಕರಣಗಳಿಗೂ ಜನ ಬೆಂಬಲ ಸಿಗಬೇಕು ಹಾಗೂ ರಾಜ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.ಎಸ್‌ಎಫ್‌ಐ ಉಪಾಧ್ಯಕ್ಷೆ ವೀಣಾಶ್ರೀ ಮಾತನಾಡಿ, ಈ ಕ್ರೂರ ಘಟನೆ ಭಯದ ವಾತಾವರಣ ನಿರ್ಮಿಸಿದೆ. ವಿದ್ಯಾರ್ಥಿನಿ ನೇಹಾ ಸಾವಿನ ನ್ಯಾಯದ ಕೂಗು ಸೌಜನ್ಯ, ದಾನಮ್ಮ ಸೇರಿದಂತೆ ಸಾವಿರಾರು ಮಂದಿ ದೌರ್ಜನ್ಯಕ್ಕೆ ಒಳಗಾಗಿದ ಮಹಿಳೆಯರ ನ್ಯಾಯಕ್ಕಾಗಿ ಧ್ವನಿ ಎತ್ತಲಿ, ಶಾಲಾ -ಕಾಲೇಜ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಭದ್ರತೆ ನೀಡಬೇಕು. ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದೆ ಇರುವುದು ಈ ಘಟನೆಗಳಿಗೆ ಕಾರಣವಾಗಿವೆ. ಆದರಿಂದ ಶಾಲಾ ಕಾಲೇಜು ಆವರಣದಲ್ಲಿ ಪೋಲೀಸ್ ಸಿಬ್ಬಂದಿ ನೇಮಿಸಬೇಕು ಎಂದರು.ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಶ್ರೀಧರ ಚಲವಾದಿ, ಮುಖಂಡರಾದ ಬಸವರಾಜ ಕೋಣಸಾಲಿ, ಅತೀಫ್ ಡಿ, ಪೂಜಾ ಬಿ, ಪೂರ್ಣಿಮಾ ಎಸ್ ಪಿ, ಸ್ನೇಹ ಡಿ ಕೆ, ಪ್ರಿಯಾ ಎಸ್, ಬಾನು ಎನ್ ಕೆ, ವಿನೋದ್ ಗೌಡ್ರ, ನಾಗರಾಜ ಎಮ್, ಮಂಜು ಡಿ, ರಾಜೇಶ್ ಎಫ್ ಎಸ್, ಅಜೇಯ, ಚಂದ್ರು ಬಾರ್ಕಿ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.