ಅರಣ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

| Published : Feb 04 2024, 01:32 AM IST / Updated: Feb 04 2024, 01:33 AM IST

ಸಾರಾಂಶ

ತಿಂಥಣಿ ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾಮಗಾರಿಯಲ್ಲಿ ಎನ್‌ಎಂಆರ್ ಪ್ರತಿಗಳ ಮೇಲೆ ಅಧಿಕಾರಿ ಕಾರ್ಮಿಕರ ಬದಲು ತಮ್ಮದೇ ಹೆಬ್ಬೆಟ್ಟಿನ ಸಹಿ ಮಾಡಿ, ಹಣ ದುರ್ಬಳಕೆ ಮಾಡಿಕೊಂಡಿದ್ದನ್ನು ಬೆರಳಚ್ಚು ತಜ್ಞರು ನೀಡಿದ ವರದಿಯಲ್ಲಿ ಸಾಬೀತಾಗಿದೆ ಎಂದು ಆರೋಪ

ಕನ್ನಡಪ್ರಭ ವಾರ್ತೆ ಯಾದಗಿರಿ

ಮನರೇಗಾ ಯೋಜನೆಯಡಿ ಕಾಮಗಾರಿಯಲ್ಲಿ ಅರಣ್ಯ ಅಧಿಕಾರಿಗಳು ಹಸ್ತಕ್ಷೇಪ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜಿಪಂ ಸಿಇಓ ಗರಿಮಾ ಪನ್ವಾರ ಅವರಿಗೆ ಮನವಿ ಸಲ್ಲಿಸಲಾಗಿದೆ.

ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಮದ್ದರು ಮಾತನಾಡಿ, ಸುರಪುರ ಸಾಮಾಜಿಕ ವಲಯ ಅರಣ್ಯಾಧಿಕಾರಿ ನರೇಗಾ ಯೋಜನೆಯಡಿ ತಿಂಥಣಿ ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾಮಗಾರಿಯಲ್ಲಿ ಎನ್‌ಎಂಆರ್ ಪ್ರತಿಗಳ ಮೇಲೆ ಅಧಿಕಾರಿ ಕಾರ್ಮಿಕರ ಬದಲು ತಮ್ಮದೇ ಹೆಬ್ಬೆಟ್ಟಿನ ಸಹಿ ಮಾಡಿ, ಹಣ ದುರ್ಬಳಕೆ ಮಾಡಿಕೊಂಡಿದ್ದನ್ನು ಬೆರಳಚ್ಚು ತಜ್ಞರು ನೀಡಿದ ವರದಿಯಲ್ಲಿ ಸಾಬೀತಾಗಿದೆ ಎಂದು ಆರೋಪಿಸಿದರು.

ಈ ಕಾಮಗಾರಿಯಲ್ಲಿ ದಲ್ಲಾಳಿಗಳು ವ್ಯವಸ್ಥಿತವಾಗಿ ಹಣ ದುರ್ಬಳಕೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡುವುದು ಬೆಳಕಿಗೆ ಬಂದಿದೆ. ಗ್ರಾಮೀಣ ಭಾಗದ ಜನತೆ ಗೂಳೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿದೆ. ಆದರೆ, ಅಧಿಕಾರಿಗಳು ಯಂತ್ರಗಳಿಂದ ಸಹಾಯ ಮಾಡಿಕೊಂಡು ಹಣ ದುರುಯೋಗಪಡಿಸಿ, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ರೀತಿ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಪಂ ವ್ಯಾಪ್ತಿಯಲ್ಲೂ ಅವ್ಯವಹಾರ ನಡೆದಿದ್ದು, ಬೆರಳಚ್ಚು ತಜ್ಞರ ವರದಿ ಬಂದಿಲ್ಲ. ಹೀಗಾಗಿ ಕೂಡಲೇ ಈ ಬಗ್ಗೆ ಗಮನ ಹರಿಸಿ, ಹಗರಣದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರಮುಖರಾದ ರಾಜಾ ವಸಂತ ನಾಯಕ ಸುರಪುರ, ಮಹಾವೀರ ಲಿಂಗೇರಿ, ವಿಜಯರಾಜ ನಾಯಕ ತಿಂಥಣಿ, ಶ್ರೀನಿವಾಸ ಚಾಮನಳ್ಳಿ, ಮಹೇಶ ಮಂಡಗಳ್ಳಿ, ದೇವರಾಜ ನಾಯಕ ತಿಂಥಣಿ, ಶಂಕರಲಿಂಗ ಹುರಸಗುಂಡಿಗಿ, ಅಂಜನೇಯ ತಾತಳಗೇರಾ, ಶರಣಪ್ಪ ತಾತಳಗೇರಾ, ಮಲ್ಲಪ್ಪ, ವಿರೂಪಾಕ್ಷಿ '''''''' ಶೆಟ್ಟಿ, ವಿನಯ ರಾಕೆ ಇದ್ದರು.