ಸಾರಾಂಶ
ವಿಘ್ನೇಶ್ ಎಂ ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆಧುನಿಕ ಕೃಷಿ ಯಂತ್ರಗಳ ಬೆಲೆಯೂ ದುಬಾರಿಯಾಗಿದೆ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ತಾನೇ ಸ್ವತಃ ಯಂತ್ರವನ್ನು ಕಂಡು ಹಿಡಿದು ರೈತರಿಗೆ ಕಡಿಮೆ ದರದಲ್ಲಿ ಯಂತ್ರವನ್ನು ನೀಡುವ ನಿಟ್ಟಿನಲ್ಲಿ ಐಟಿಐ ವಿದ್ಯಾರ್ಥಿ ಲೋಕಪ್ರಿಯ ಉತ್ಸುಕತೆ ತೋರಿದ್ದಾರೆ.ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಆವಂದೂರಿನ ನಿವಾಸಿಯಾಗಿರುವ ಲೋಕಪ್ರಿಯ ಮಡಿಕೇರಿಯಲ್ಲಿ ದ್ವಿತೀಯ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ ವಿದ್ಯಾಭ್ಯಾಸದೊಂದಿಗೆ ಕೃಷಿ ಯಂತ್ರೋಪಕರಣಗಳನ್ನು ಕಂಡು ಹಿಡಿಯುವ ಮೂಲಕ ಮಾದರಿಯಾಗಿದ್ದಾರೆ.
7ನೇ ತರಗತಿ ಓದುತ್ತಿರುವಾಗಲೇ ಹಲವಾರು ಪ್ರಾಜೆಕ್ಟ್ ಗಳನ್ನು ಮಾಡುವ ಆಸಕ್ತಿ ಹೊಂದಿದ್ದರು. ಈ ಆಸಕ್ತಿಯನ್ನು ಈಗಲೂ ಹೆಚ್ಚಿಸುವ ಮೂಲಕ ಹೊಸ ಹೊಸ ಯಂತ್ರಗಳನ್ನು ಕಂಡು ಹಿಡಿಯುವಲ್ಲಿ ಸದಾ ಮುಂದಿದ್ದಾರೆ.ಸದ್ಯ ಇವರು ಸೋಲಾರ್ ಹಾಗೂ ಬ್ಯಾಟರಿ ಚಾಲಿತ ಕಳೆ ಕತ್ತರಿಸುವ ಮಿನಿ ಯಂತ್ರ ಹಾಗೂ ರೂಂ ಹೀಟರ್ ಅನ್ನು ವಿಶೇಷ ರೀತಿಯಲ್ಲಿ ತಯಾರು ಮಾಡಿದ್ದಾರೆ. ಗುಜರಿ ಅಂಗಡಿಯಲ್ಲಿ ಸಿಕ್ಕ ಕಚ್ಚಾ ವಸ್ತುಗಳನ್ನೇ ಬಳಸಿ ಯಂತ್ರಗಳನ್ನು ಮಾಡಿರುವುದು ವಿಶೇಷ.
ಅಂಗಡಿಗಳಲ್ಲಿ ಕಳೆ ಕತ್ತರಿಸುವ ಯಂತ್ರಗಳು 10 ಸಾವಿರ ರು. ದಿಂದ ಆರಂಭವಾಗುತ್ತದೆ. ಬ್ಯಾಟರಿ ಚಾಲಿತ ಯಂತ್ರಕ್ಕೆ 25 ಸಾವಿರ ರು. ಬೆಲೆ ಇದೆ. ಆದರೆ ಇವರು ತಯಾರಿಸಿರುವ ಯಂತ್ರಕ್ಕೆ 6 ಸಾವಿರ ರು. ಮಾತ್ರ ವೆಚ್ಚವಾಗಿದೆ. ಇದರಿಂದ ರೈತರಿಗೆ ಕಡಿಮೆ ದರದಲ್ಲಿ ವಿತರಿಸಲು ಸಾಧ್ಯವಾಗಿದೆ. ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗೆ ಮಾಡಿಕೊಳ್ಳಲು ರೂಂ ಹೀಟರ್ ಕೂಡ ತಯಾರಿಸಿದ್ದು, 2.5 ಸಾವಿರ ರು. ವೆಚ್ಚವಾಗಿದೆ. ಮತ್ತೊಂದು ಹೀಟರ್ ಗೆ ರು.8 ಸಾವಿರ ವೆಚ್ಚದಲ್ಲಿ ಮಾಡಲಾಗಿದೆ.ಗುಜರಿ ಅಂಗಡಿಯಿಂದ ಓಮ್ನಿ ಕಾರಿನ ಮೋಟಾರ್ ಬಳಸಿ ಮಿನಿ ಕಳೆ ಕತ್ತರಿಸುವ ಯಂತ್ರ ಮಾಡಿದ್ದಾರೆ. ಈಗಾಗಲೇ ಕೆಲವರಿಗೆ ಮಿನಿ ಕಳೆ ಕತ್ತರಿಸುವ ಯಂತ್ರವನ್ನು ತಯಾರಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲೋಕಪ್ರಿಯ ಅವರು ತಯಾರು ಮಾಡಿರುವ ಕಳೆ ಕತ್ತರಿಸುವ ಮಿನಿ ಯಂತ್ರವನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸಿದ್ದಾರೆ. ಅಲ್ಲದೆ ಇದಕ್ಕೆ ತಮಗೆ ಆರ್ಡರ್ ಕೂಡ ಬರುತ್ತಿದೆ. ಆದರೆ ಸದ್ಯಕ್ಕೆ ಆದಾಯ ಮೂಲ ಇಲ್ಲದಿರುವುದರಿಂದ ಯಾವ ಆರ್ಡರ್ ಕೂಡ ಒಪ್ಪಿಕೊಳ್ಳುತ್ತಿಲ್ಲ. ಬದಲಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡುತ್ತೇನೆಂದು ಲೋಕಪ್ರಿಯ ಹೇಳುತ್ತಾರೆ.ತಾನು ಮಾಡುವ ಯಂತ್ರೋಪಕರಣಗಳು ಸೋಲಾರ್ ನಿಂದಲೇ ಚಲಿಸುವಂತೆ ಮಾಡಬೇಕೆಂದುಕೊಂಡಿದ್ದೇನೆ. ವಿದ್ಯುತ್ ಹಾಗೂ ಪೆಟ್ರೋಲ್ ನಿಂದ ಮಾಡಿದ ಯಂತ್ರವಾದರೆ ರೈತರಿಗೆ ಹೊರೆಯಾಗುತ್ತದೆ. ಇದರಿಂದ ಸೋಲಾರ್ ಬಳಕೆ ಮಾಡಿ ರೈತರಿಗೆ ಅನುಕೂಲವಾಗುವಂತೆ ಯಂತ್ರಗಳನ್ನು ಕಂಡು ಹಿಡಿಯುತ್ತೇನೆ ಎನ್ನುತ್ತಾರೆ ಲೋಕಪ್ರಿಯ.
ಬಿಳಿಗೇರಿ ಗ್ರಾಮದ ಆಕಾಶ್ ಕೂಡ ಲೋಕಪ್ರಿಯ ಅವರ ಬೆಂಬಲಕ್ಕೆ ನಿಂತಿದ್ದಾರೆ. ತಾನು ತಯಾರು ಮಾಡಿದ ಯಂತ್ರಕ್ಕೆ ಇ.ಎಂ. ಲೋಕಪ್ರಿಯ ಎಂದು ಹೆಸರನ್ನು ಕೂಡ ಹಾಕಿದ್ದಾರೆ. ವ್ಯಾಸಂಗ ಮುಗಿಸಿದ ಕೃಷಿ ಯಂತ್ರೋಪಕರಣಗಳನ್ನು ಕಂಡು ಹಿಡಿದು ರೈತರಿಗೆ ಕಡಿಮೆ ದರದಲ್ಲಿ ವಿತರಿಸುವ ಹಂಬಲ ಹೊಂದಿದ್ದಾರೆ. ಅಪ್ಪಟ ಬಡತನದ ಪ್ರತಿಭೆ!: ಆವಂದೂರು ಗ್ರಾಮದಲ್ಲಿ ನೆಲೆಸಿರುವ ಲೋಕಪ್ರಿಯ ಅಪ್ಪಟ ಬಡತನದಲ್ಲಿ ಬೆಳೆದ ಪ್ರತಿಭೆ. ತನ್ನ ಸಣ್ಣ ಪ್ರಾಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಪ್ಪ ಕೂಡ ತನ್ನೊಂದಿಗೆ ಇಲ್ಲ. ಅಜ್ಜಿಯೇ ಈತನಿಗೆ ಆಸರೆಯಾಗಿದ್ದಾರೆ. ಇರುವ ಕಡಿಮೆ ಜಾಗದಲ್ಲಿ ಕಾಫಿ, ಅಡಕೆ, ಬಾಳೆ ಕೃಷಿಯನ್ನು ಮಾಡುತ್ತಾರೆ. ಅಲ್ಲದೆ ರಜೆ ಸಂದರ್ಭ ಕ್ಯಾಟರಿಂಗ್ ಕೆಲಸಕ್ಕೂ ಹೋಗುತ್ತಾರೆ. ತನ್ನ ಬಿಡುವಿನ ಸಮಯದಲ್ಲಿ ಯಂತ್ರೋಪಕರಣ ಆವಿಷ್ಕಾರ ಮಾಡುವ ಮೂಲಕ ಲೋಕಪ್ರಿಯ ವಿದ್ಯಾಭ್ಯಾಸವನ್ನು ಕೂಡ ಮಾಡಿಕೊಂಡು ಹೊಸ ಪ್ರಯೋಗಕ್ಕೆ ಮುಂದಾಗುವ ಮೂಲಕ ಹಲವು ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಸೋಲಾರ್ ಹಾಗೂ ಬ್ಯಾಟರಿ ಚಾಲಿತ ಯಂತ್ರೋಪಕರಣಗಳನ್ನು ತಯಾರಿಸಿ ಕಡಿಮೆ ದರದಲ್ಲಿ ರೈತರಿಗೆ ನೀಡಲು ಚಿಂತಿಸಿದ್ದೇನೆ. ಆದರೆ ಆದಾಯ ಮೂಲ ಇಲ್ಲ. ಅಲ್ಲದೆ ಈಗ ವ್ಯಾಸಂಗ ಮಾಡುತ್ತಿರುವುದರಿಂದ ಸಮಯದ ಕೊರತೆಯೂ ಇದೆ. ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಆವಿಷ್ಕಾರ ಮಾಡುತ್ತೇನೆ ಎನ್ನುತ್ತಾರೆ ಲೋಕಪ್ರಿಯ.