ಕಬ್ಬು ಬೆಳೆಗೆ ಅಧಿಕೃತ ದರ ಘೋಷಿಸುವಂತೆ ಒತ್ತಾಯ

| Published : Oct 27 2025, 02:00 AM IST

ಕಬ್ಬು ಬೆಳೆಗೆ ಅಧಿಕೃತ ದರ ಘೋಷಿಸುವಂತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3400 ದರ ಘೋಷಣೆ ಮಾಡಿವೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರ ಕೂಡಾ ಕಬ್ಬು ಬೆಳೆಗಾರರಿಗೆ ಕನಿಷ್ಠ ₹3500 ದರ ಘೋಷಿಸಬೇಕು.

ಕನನಡಪ್ರಭ ವಾರ್ತೆ ಅಥಣಿ

ರಾಜ್ಯದಲ್ಲಿ ಕಳೆದ ಸೆ.20ರಿಂದ ಕಬ್ಬಿನ ಕಾರ್ಖಾನೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇಲ್ಲಿಯವರಿಗೆ ಯಾವುದೇ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಅಧಿಕೃತ ದರ ಘೋಷಣೆ ಮಾಡಿಲ್ಲ, ದರ ಘೋಷಿಸಿ ಕಬ್ಬುನರಿಸುವ ಹಂಗಾಮಿಗೆ ಚಾಲನೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.

ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಬಿಲ್ ಮತ್ತು ಅಧಿಕೃತ ದರ ನೀಡುವಲ್ಲಿ ವಿಫಲವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3400 ದರ ಘೋಷಣೆ ಮಾಡಿವೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರ ಕೂಡಾ ಕಬ್ಬು ಬೆಳೆಗಾರರಿಗೆ ಕನಿಷ್ಠ ₹3500 ದರ ಘೋಷಿಸಬೇಕು. ಬರುವ ನವೆಂಬರ್ ಒಂದರ ಅಧಿಕೃತ ದರ ಘೋಷಿಸಿದೆ ಇದ್ದಲ್ಲಿ ರೈತರು ಬೀದಿಗಿಳಿದು ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಬಹುತೇಕ ಕಾರ್ಖಾನೆಗಳು ಶಾಸಕರ ಒಡೆತನದ ಕಾರ್ಖಾನೆಗಳಾಗಿದ್ದು, ಕಾರ್ಖಾನೆಯವರ ಕೈಗೊಂಬೆಯಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಈ ಹಿಂದೆ ಅನೇಕ ಸಕ್ಕರೆ ಕಾರ್ಖಾನೆಗಳು ನೀಡಬೇಕಾದ ಬಾಕಿ ಬಿಲ್‌ಗಳನ್ನು ನೀಡದೆ ರೈತರನ್ನು ಸತಾಯಿಸುತ್ತಿದ್ದಾರೆ. ರೈತರಿಗೆ ಸೂಕ್ತವಾದ ದರ ನೀಡುತ್ತಿಲ್ಲ, ಕಾರ್ಖಾನೆಗಳಲ್ಲಿ ಆಗುತ್ತಿರುವ ತೂಕದಲ್ಲಿನ ಮೋಸವನ್ನು ತಡೆಗಟ್ಟಬೇಕು. ರೈತರ ಗುಣಮಟ್ಟದ ಕಬ್ಬಿಗೆ ಒಳ್ಳೆಯ ದರ ನೀಡಬೇಕು. ಸದ್ಯ ಅನೇಕ ಸಕ್ಕರೆ ಕಾರ್ಖಾನೆಗಳು ಕಬ್ಬುನುರಿಸುವ ಹಂಗಾಮಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ ಇನ್ನುವರೆಗೆ ಯಾವುದೇ ಅಧಿಕೃತ ದರ ಘೋಷಣೆ ಮಾಡುತ್ತಿಲ್ಲ. ಬೇಗನೆ ದರ ಘೋಷಿಸಬೇಕು ಇಲ್ಲದಿದ್ದರೆ ಯಾವುದೇ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರುಜಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ನ್ಯಾಯಯುತ ದರ ದೊರಕುತ್ತಿಲ್ಲ. ರೈತರು ಮತ್ತು ರೈತ ಪರ ಸಂಘಟನೆಗಳು ಅನೇಕ ಬಾರಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಅನಿವಾರ್ಯವಾಗಿದೆ. ಅಧಿಕೃತ ದರ ಘೋಷಿಸಿ ಕಾರ್ಖಾನೆಗಳನ್ನು ಆರಂಭಿಸಬೇಕು. ಬರುವ ಒಂದನೇ ತಾರೀಕಿನ ಒಳಗಾಗಿ ಅಧಿಕೃತ ದರ ಘೋಷಿಸದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಥಣಿ ಪಟ್ಟಣದ ಜೇವರ್ಗಿ ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ನೂರಾರು ರೈತರು ಮತ್ತು ರೈತ ಸಂಘಟನೆಯ ಮುಖಂಡರು ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರೈತರು ಅರೆಬೆತ್ತಲೆಯಲ್ಲೇ ಮೂಲಕ ಬಾರುಕೊಲು ಚಾಟಿ ಬಿಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಸುಮಾರು ಒಂದು ಗಂಟೆಯವರೆಗೆ ನಡೆದ ಪ್ರತಿಭಟನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿತ್ತು. ಟ್ರಾಫಿಕ್ ನಿಯಂತ್ರಣ ಮತ್ತು ಪರ್ಯಾಯ ಮಾರ್ಗ ಕಲ್ಪಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು. ನಂತರ ಪೊಲೀಸ್ ಅಧಿಕಾರಿಗಳು ರೈತರ ಮುಖಂಡರ ಪ್ರತಿಭಟನೆ ತಿಳಿಗೊಳಿಸಿದರು. ರೈತ ಮುಖಂಡರಾದ ಎಂ.ಸಿ ತಂಭೋಳಿ, ಪ್ರಕಾಶ್ ಪೂಜಾರಿ, ಮಾಜಿ ಸೈನಿಕ ಗುರಪ್ಪ ಮಗದುಮ, ಸಾಮಾಜಿಕ ಹೋರಾಟಗಾರ ಸಂಪತ್ ಕುಮಾರ್ ಶೆಟ್ಟಿ ಸೇರಿದಂತೆ ತಾಲೂಕಿನ ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.