ಹೊಸಪೇಟೆ: ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಮಾಜ ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಕಾಂಗ್ರೆಸ್‌ನಲ್ಲಿ ವಾಲ್ಮೀಕಿ - ನಾಯಕ ಸಮುದಾಯದಿಂದ 14 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೂವರು ವಾಲ್ಮೀಕಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಅದೇ ರೀತಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಈಗಾಗಲೇ ವಾಲ್ಮೀಕಿ ಸಮುದಾಯದ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದ್ದು, ವಿಜಯನಗರ- ಬಳ್ಳಾರಿ ಅವಳಿ ಜಿಲ್ಲೆಯ ವಾಲ್ಮೀಕಿ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲಿ ಯುವ ಶಾಸಕ ಜೆ.ಎನ್. ಗಣೇಶ್ ಅವರಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಟಿ ಮೀಸಲಾತಿ ಜಾರಿ ಕುರಿತು ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಮುದಾಯದ ಎಲ್ಲ ಶಾಸಕರನ್ನು ಒಳಗೊಂಡ ಹೋರಾಟವನ್ನು ಹೊಸಪೇಟೆಯಿಂದಲೇ ಆರಂಭಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಜಂಬಾನಳ್ಳಿ ರಾಮಣ್ಣ, ಕಿಚಿಡಿ ವಸಂತ, ನಗರಸಭೆ ಮಾಜಿ ಸದಸ್ಯ ದುರುಗಪ್ಪ ಪೂಜಾರಿ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ, ಉಪಾಧ್ಯಕ್ಷ ಕಿನ್ನಾಳ ಹನುಮಂತ, ತಾರಿಹಳ್ಳಿ ವೆಂಕಟೇಶ್, ಬಂಡೆ ರಂಗಪ್ಪ, ಬ್ಯಾಂಕ್ ಚಂದ್ರಪ್ಪ, ಜಂಬಾನಳ್ಳಿ ವಸಂತ, ಜಂಬಾನಳ್ಳಿ ಸತ್ಯನಾರಾಯಣ, ವೆಂಕಟೇಶ್, ದುಶ್ಯಂತ, ಗುಜ್ಜಲ್ ನಿಂಗಪ್ಪ, ಸಿಂದಿಗೇರಿ ದೇವೇಂದ್ರಪ್ಪ, ಎಸ್.ಎಸ್. ಚಂದ್ರಶೇಖರ್, ನಾಗರಾಜ, ಸೋಮನಾಥ, ವಸಂತಕುಮಾರ್, ಕಣ್ಣಿ ಶ್ರೀಕಂಠ, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಉಪಸ್ಥಿತರಿದ್ದರು.ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಸರ್ಕಾರಕ್ಕೆ ಆಗ್ರಹಿಸಲಾಯಿತು.