ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪರಿಶಿಷ್ಠ ಜಾತಿಗೆ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ. ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಒಳ ಮೀಸಲಾತಿ ಆಯೋಗವು ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ಸರ್ಕಾರ ಸಾರಸಗಟಾಗಿ ತಿರಸ್ಕರಿಸುವಂತೆ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಯರಿಯೂರು ರಾಜಣ್ಣ ಅವರು ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ನ್ಯಾ. ನಾಗಮೋಹನದಾಸ್ ಒಳಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಠ ಜಾತಿಯ ಕುಟುಂಬಗಳ ಸಮೀಕ್ಷೆಯನ್ನು ಮೇ 5ರಿಂದ ಜುಲೈ 6ರ ವರಗೆ ನಡೆಸಿ ಆ. 4ರಂದು ವರದಿ ಸಲ್ಲಿಸಿದೆ. ಎಡಗೈ ಗುಂಪಿಗೆ ಶೇ.6 ಬಲಗೈ ಗುಂಪಿಗೆ ಶೇ.5 ಬಂಜಾರ, ಬೋವಿ, ಕೊರಮ, ಕೊರಚ, ಅಸ್ಪೃಶ್ಯರಲ್ಲದ ಜಾತಿಗಳಿಗೆ ಶೇ. 4ರಷ್ಟು ಜಾತಿಯೇ ಅಲ್ಲದ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಗುಂಪಿಗೆ ಶೇ. 1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಏಕಪಕ್ಷೀಯವಾಗಿ ಒಂದು ಸಮುದಾಯವನ್ನು ಒಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿ ವರದಿ ಸಲ್ಲಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಸಮೀಕ್ಷೆಯ ಪ್ರಾರಂಭದಲ್ಲಿ ಪ್ರತಿ ಗಣತಿದಾರರಿಗೆ ಟ್ಯಾಬ್‌ಗಳನ್ನು ನೀಡದೆ ಮೊಬೈಲ್‌ಗಳು ಇಲ್ಲದ ಕಾರಣ ಅಂಕಿ ಅಂಶಗಳನ್ನು ನಿಗರವಾಗಿ ಸರ್ವೇ ಮಾಡಿಲ್ಲ. ಪಡಿತರ ಚೀಟಿ. ಲಿಂಗ್ ಪಡೆದು ಪಡಿತರ ಚೀಟಿಯಲ್ಲಿ ಹೆಸರು ಇಲ್ಲದವರನ್ನು ಸಮೀಕ್ಷೆಯಲ್ಲಿ ದಾಖಲಿಸಿರುವುದಿಲ್ಲ, ಆಧಾರ್ ಇಲ್ಲದ ಕೆಲವು ಮಕ್ಕಳನ್ನು ಸೇರ್ಪಡೆಗೊಳಿಸಿರುವುದರಲ್ಲಿ ವಿಫಲವಾಗಿದೆ ಎಂದರು.ಗ್ರಾಮಾಂತರ ಪ್ರದೇಶಗಳಲ್ಲಿ ನಗರ ಪ್ರದೇಶಗಳಲ್ಲಿ ಬೂತ್‌ಗಳನ್ನು ತೆರೆದು ಸಮೀಕ್ಷೆ ಮಾಡಿಲ್ಲ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡದೇ ಶೇ. 48ರಷ್ಟು ಪೂರ್ಣಗೊಂಡಿಲ್ಲ, ವಾಸ್ತವವಾಗಿ ಕುಟುಂಬಗಳ ಸರ್ವೆ ನಡೆದಿಲ್ಲ ಎಂದು ದೂರಿದರು.
ಆದಿ ಕರ್ನಾಟಕ ಆದಿ ಆಂದ್ರ, ಆದಿ ದ್ರಾವಿಡ ಜಾತಿಗಳಲ್ಲದ ಗುಂಪಿಗೆ ಶೇ. 1ರಷ್ಟು ಮೀಸಲಾತಿ ನೀಡಿರುವುದು ಮತ್ತು ಬೇಡ ಜಂಗಮ ಎಂದು ಜಾತಿ ಸಮೀಕ್ಷೆಯಲ್ಲಿ ನಮೂದಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸಿಂಧುತ್ವ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣ ಪತ್ರ ಸಲ್ಲಿಸಿದೆ ಇದ್ದರೂ ಬೇಡ ಜಂಗಮ ದಾಖಲಿಸಲು ಅವಕಾಶ ಕಲ್ಪಿಸಿ ನಿಜವಾದ ಅಸ್ಪೃಶ್ಯ ಜನಾಂಗದವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕರಿಬೇಕು ಎಂದು ಒತ್ತಾಯಿಸಿ ಆ. 13ರಂದು ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಸಂಸ ಜಿಲ್ಲಾ ಸಂಚಾಲಕ ಸಿ.ಎಂ ಶಿವಣ್ಣ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡಿದರೆ ಒಂದು ಸಮುದಾಯಕ್ಕೆ ಅನ್ಯಾಯವಾಗಲಿದೆ. ಸಮೀಕ್ಷೆಯನ್ನು ಕೈ ಬಿಟ್ಟು ಮರು ಸಮೀಕ್ಷೆಯನ್ನು ಮಾಡಬೇಕು ಇಲ್ಲದಿದ್ದರೆ ದಲಿತ ಸಂಘಟನೆ ವತಿಯಿಂದ ಕರ್ನಾಟಕವನ್ನು ಬಂದ್ ಮಾಡುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಶಿವನಾಗಯ್ಯ, ಸಾಹಿತಿ ಸಿದ್ದರಾಜು, ಕಂದಹಳ್ಳಿ ನಾರಾಯಣ, ಬಸವರಾಜು ಕೆರಹಳ್ಳಿ, ನಂಜುಂಡಸ್ವಾಮಿ ಇದ್ದರು.
---------------11ಸಿಎಚ್‌ಎನ್51
ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಸುದ್ದಿಗೋಷ್ಠಿ ನಡೆಸಿದರು.-------------