ಸಾರಾಂಶ
ಧಾರವಾಡ: ಪತ್ರಿಕಾ ರಂಗದಲ್ಲಿಯ ಮೌಲ್ಯಗಳ ಕುಸಿತ ನಿಜಕ್ಕೂ ಆಘಾತಕಾರಿ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಾಹಿತಿ ಮನೋಜ ಪಾಟೀಲ ಅವರ 21 ವಿವಿಧ ವಿಷಯಗಳ ಮೇಲಿನ ಲೇಖನಗಳ ಸಂಗ್ರಹ ‘ಮುಕ್ತ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ದೇಶದ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ರಕ್ಷಣೆ ಪತ್ರಿಕಾ ರಂಗದ ಕಡೆಗಿತ್ತು. ಆದರೆ, ಇಂದಿನ ದಿನಗಳಲ್ಲಿ ಈ ಕಾರ್ಯ ಸರಿಯಾಗಿ ಆಗುತ್ತದೆಯೇ ಎಂಬ ಸಂಶಯ ಮೂಡಿದೆ.
ಒಂದು ಕಾಲಕ್ಕೆ ಶಾಸನ ಸಭೆಯಲ್ಲಿ ಪ್ರೆಸ್ ಗ್ಯಾಲರಿ ನೋಡಿ ಮಾತನಾಡುವ ಶಾಸಕರ ಸಂಖ್ಯೆ ಹೆಚ್ಚಿತ್ತು. ಇದರ ಅರ್ಥ ನಮ್ಮ ಮಾತುಗಳನ್ನು ಅರ್ಥೈಸಿಕೊಳ್ಳಬಲ್ಲವರು ಪತ್ರಕರ್ತರು ಎಂಬ ಭಾವನೆ ಇತ್ತು ಎಂದ ಹೊರಟ್ಟಿ ಈಗೀಗ ‘ಮುಖ ನೋಡಿ ಬರೆಯುವ ಪ್ರವೃತ್ತಿ ಪತ್ರಕರ್ತರಲ್ಲಿ ಹೆಚ್ಚುತ್ತಿದೆ. ಹೀಗಾಗಿ ಮೌಲ್ಯ ತಂತಾನೇ ಕಡಿಮೆಯಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ನಿರಂತರ ಅಧ್ಯಯನದಿಂದ ಸಮಚಿತ್ತದಿಂದ ಹೃದಯದಿಂದ ಬರೆದ ಪರಿಣತ ಭಾಷೆಯನ್ನು ಮುಕ್ತದಲ್ಲಿ ಬಳಸಿದ್ದಾರೆ ಎಂದರು.
‘ಮುಕ್ತ’ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತ ಮೋಹನ ಹೆಗಡೆ, ಮುಕ್ತ ಪುಸ್ತಕದಲ್ಲಿ ಹಲವು ವಿಷಯಗಳು ಅಪ್ಯಾಯಮಾನವಾಗಿ ಬಂದಿವೆ. ಉದಯೋನ್ಮುಖ ಪತ್ರಕರ್ತರು ಮತ್ತು ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪುಸ್ತಕದ ಬಗ್ಗೆ ಅಧ್ಯಯನ ಅಗತ್ಯ ಎಂದರು. ನಿವೃತ್ತ ಅಧಿಕಾರಿ ಜಿ.ಸಿ. ತಲ್ಲೂರ ಮಾತನಾಡಿದರು.
ಮಲ್ಲಿಕಾರ್ಜುನ ಹಿರೇಮಠ. ಪ್ರೊ. ದುಷ್ಯಂತ ನಾಡಗೌಡ, ಬಸವಪ್ರಭು ಹೊಸಕೇರಿ, ಕೆ.ಬಿ ಪಾಟೀಲ ಕುಲಕರ್ಣಿ, ಶಂಕರ ಹಲಗತ್ತಿ ಇದ್ದರು.