ಸಾರಾಂಶ
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ₹12.45 ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ₹12.45 ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ತಮ್ಮ ಹೆಸರಿನಲ್ಲಿ ₹9.82 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ₹2.63 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲ. ಆಸ್ತಿಯಲ್ಲಿ ಕೋಟ್ಯಧಿಪತಿ ಆಗಿದ್ದರೂ ಶೆಟ್ಟರ್ ಅವರ ಮೇಲೆ ₹57.26 ಲಕ್ಷ ಸಾಲದ ಭಾರವಿದೆ.ಅವರ ಪತ್ನಿ ಶಿಲ್ಪಾ ಶೆಟ್ಟರ್ ಹೆಸರಿನಲ್ಲಿ ₹1 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದ್ದರೆ, ₹91.10 ಲಕ್ಷ ಮೌಲ್ಯದ ಚರಾಸ್ತಿ ಇದೆ ಎಂದು ಸೋಮವಾರ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರದ ಜೊತೆಗೆ ಆಸ್ತಿ ಘೋಷಣೆ ಮಾಡಿದ್ದಾರೆ.
64 ವರ್ಷ ವಯಸ್ಸಿನ ಜಗದೀಶ ಶೆಟ್ಟರ್ ಕಾನೂನು ಪದವೀಧರಾಗಿದ್ದು, ತಮ್ಮ ಮಕ್ಕಳ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಹಾಗೂ ಚರಾಸ್ತಿ ತೋರಿಸಿಲ್ಲ. 2022-23ನೇ ಸಾಲಿನ ಆದಾಯ ತೆರಿಗೆಯಲ್ಲಿ ₹ 33.16 ಲಕ್ಷ ಆದಾಯ ತೋರಿಸಿದ್ದಾರೆ. 2021-22 ನೇ ಸಾಲಿನಲ್ಲಿ ಶೆಟ್ಟರ್ ಅವರ ಆದಾಯ ₹ 29.76 ಲಕ್ಷ ಆದಾಯ ಇತ್ತು.ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್ ಅವರ ಒಟ್ಟು ಆಸ್ತಿ ಮೌಲ್ಯ ₹ 13.51 ಕೋಟಿ ಇತ್ತು. ಆದರೆ, ಕೇವಲ ಒಂದು ವರ್ಷದ ಅವಧಿಯಲ್ಲಿ ಅವರ ಆಸ್ತಿ ಸಂಪಾದನೆ₹ 1 ಕೋಟಿಯಷ್ಟು ಇಳಿಕೆಯಾಗಿದೆ. ಈಗ ಲೋಕಸಭಾ ಚುನಾವಣೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರ ಆಸ್ತಿ ₹ 12.45 ಕೋಟಿ ಯಷ್ಟಿದೆ.
2023ರಲ್ಲಿ ಚರಾಸ್ತಿ ₹ 3.42 ಕೋಟಿ ಇದ್ದರೆ, ಈಗ ₹ 2.63 ಇದೆ. 2023ರಲ್ಲಿ ಸ್ಥಿರಾಸ್ತಿ ₹ 10.08 ಕೋಟಿ ಇದ್ದರೆ, 2024ರಲ್ಲಿ₹ 9.89 ಕೋಟಿಯಿದೆ.ಜಗದೀಶ ಶೆಟ್ಟರ್ ತಮ್ಮ ಪತ್ನಿ ಶಿಲ್ಪಾ ಅವರಿಗೆ ₹ 14.40 ಲಕ್ಷ, ಮಕ್ಕಳಾದ ಪ್ರಶಾಂತನಿಗೆ ₹ 26.33 ಲಕ್ಷ , ಇನ್ನೋರ್ವ ಪುತ್ರ ಸಂಕಲ್ಪನಿಗೆ ₹ 45.11 ಲಕ್ಷ ಮತ್ತು ಸಹೋದರ ಮೋಹನಗೆ ₹ 35. 2 ಲಕ್ಷ ಸೇರಿ ಒಟ್ಟು ₹ 1.24 ಕೋಟಿ ಸಾಲ ನೀಡಿದ್ದಾರೆ. ಅದೇ ರೀತಿ ಶಿಲ್ಪಾ ಶೆಟ್ಟರ್ ಅವರು ತಮ್ಮ ಪುತ್ರರಾದ ಪ್ರಶಾಂತಗೆ ₹ 4,30 ಲಕ್ಷ ಮತ್ತು ಸಂಕಲ್ಪಗೆ ₹ 20 ಸಾವಿರ ಸಾಲ ಕೊಟ್ಟಿದ್ದಾರೆ.
ಜಗದೀಶ ಶೆಟ್ಟರ ಅವರ ಕೈಯಲ್ಲಿ ₹ 15. 37 ಲಕ್ಷ ಮತ್ತು ಪತ್ನಿಯ ಬಳಿ ₹ 2.50 ಲಕ್ಷ ನಗದು ಹಣವಿದೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಜಗದೀಶ ಶೆಟ್ಟರ್ ₹ 66.96 ಲಕ್ಷ ಠೇವಣಿ , ₹ 10.43 ಕೋಟಿ ಬೆಲೆಯ ಷೇರು ಹಾಗೂ ಬಾಂಡ್‌ಗಳನ್ನು ಹೊಂದಿದ್ದಾರೆ. ಅಲ್ಲದೆ,₹ 42.94 ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳಿವೆ. ಪತ್ನಿ ಶಿಲ್ಪಾ ಹೆಸರಿನಲ್ಲಿ ₹ 5.33 ಲಕ್ಷ ಠೇವಣಿ ಮತ್ತು ₹ 7.82 ಲಕ್ಷ ಷೇರು ಮತ್ತು ಬಾಂಡ್‌ಗಳಿದ್ದು, ₹ 74.90 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿವೆ.