ಕರ್ತವ್ಯಲೋಪ, ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೆ ಆದೇಶ

| Published : Apr 16 2024, 01:04 AM IST

ಸಾರಾಂಶ

ಈರ್ವರು ಅಧಿಕಾರಿಗಳಿಗೆ ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿದ ರಾಣಿಬೆನ್ನೂರ ತಾಲೂಕಿನ ಬಿ.ಎಲ್.ಓ ಮತ್ತು ಗ್ರಾಮಲೆಕ್ಕಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ ಘಟನೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ನಡೆಯಿತು.

ಬ್ಯಾಡಗಿ: ಪೂರ್ವಾನುಮತಿ ಪಡೆಯದೇ ಪೂರ್ವಭಾವಿ ಸಭೆಗೆ (ಚುನಾವಣೆ) ಗೈರಾದ ಈರ್ವರು ಅಧಿಕಾರಿಗಳಿಗೆ ಹಾಗೂ ಮೊಬೈಲ್ ಸ್ವಿಚ್ ಆಫ್ ಮಾಡಿದ ರಾಣಿಬೆನ್ನೂರ ತಾಲೂಕಿನ ಬಿ.ಎಲ್.ಓ ಮತ್ತು ಗ್ರಾಮಲೆಕ್ಕಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ ಘಟನೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ (ಬ್ಯಾಡಗಿ ನಂ. 85 ಮತಕ್ಷೇತ್ರ) ಮಮತಾ ಹೊಸಗೌಡ್ರ, ಲೋಕಸಭೆ ಚುನಾವಣೆ ನಿಮಿತ್ತ ನಡೆಯುವಂತಹ ಸಭೆಗಳಲ್ಲಿ ಮಹತ್ವದ ವಿಷಯಗಳನ್ನು ತಿಳಿಯಪಡಿಸಲಾಗುತ್ತದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಗೈರಾಗುವುದನ್ನು ಕರ್ತವ್ಯಲೋಪವೆಂದು ಪರಿಗಣಿಸಲಾಗುತ್ತಿದ್ದು, ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

ನಿರ್ಲಕ್ಷ್ಯ ಧೋರಣೆ ಸಹಿಸುವುದಿಲ್ಲ: ಚುನಾವಣೆ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆ ಕೆಲಸವನ್ನು ಯುದ್ಧೋಪಾದಿಯಲ್ಲಿ ಸಮರ್ಥವಾಗಿ ನಿರ್ವಹಿಸುವುದು ಅನಿವಾರ್ಯ, ಹೀಗಿರುವಾಗ ಬಹುತೇಕ ಕೆಳಹಂತದ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡುವುದು, ಹೇಳದೇ ಕೇಳದೇ ಗೈರಾಗುವುದನ್ನು ಅಥವಾ ಅಂತಹ ಬೇಜವಾಬ್ಧಾರಿ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಪೋಲಿಂಗ್ ಬೂತ್‌ಗಳ ಮೆಲುಸ್ತುವಾರಿ ನಡೆಸಿ

ಸೆಕ್ಟರ್ ಅಧಿಕಾರಿಗಳು ಎರಡ್ಮೂರು ಬಾರಿ ಪೋಲಿಂಗ್ ಬೂತ್‌ಗಳನ್ನು ಪರಿಶೀಲನೆಗೊಳಿಪಡಿಸಬೇಕು, ಹಿರಿಯ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಪೋಲಿಂಗ್ ಬೂತ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಎಂದು ಕಂಡು ಬಂದಲ್ಲಿ ಸಂಬಂಧಿಸಿದ ಸೆಕ್ಟರ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕೆಗಳಿಗೆ ಮಾಹಿತಿ ಕೊಡಿ: ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾ ಮಾಧ್ಯಮಗಳ ಸಹಕಾರದೊಂದಿಗೆ ಮತದಾರರಿಗೆ ಅಗತ್ಯವಾದ ಎಲ್ಲ ರೀತಿಯ ಮಾಹಿತಿಗಳು ತಲುಪುವಂತೆ ಮಾಡಬೇಕಾಗಿದೆ. ಅದರಲ್ಲೂ, 18 ವರ್ಷ ದಾಟಿದ ಹೊಸ ಮತದಾರರ ಸೇರ್ಪಡೆಯಂತಹ ಕಾರ್ಯಕ್ರಮಗಳು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕಲ್ಲದೇ ಶೇಕಡವಾರು ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗುವಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಪುಟ್ಟರಾಜು, ಬಿಇಓ ಎಸ್.ಜಿ. ಕೋಟಿ, ಅಧಿಕಾರಿಗಳಾದ ಉಮೇಶ ನಾಯಕ್, ಎಚ್. ಎಸ್‌. ಪೂಜಾರ, ಹನುಮಂತ ಲಮಾಣಿ, ವೈ.ಎಂ. ಮಟಗಾರ, ಎಂ.ಎಫ್. ಕರಿಯಣ್ಣನವರ, ಡಿ.ಬಿ. ಕುಸಗೂರ ಸೇರಿದಂತೆ ಇನ್ನಿತರರಿದ್ದರು.ಶೋಕಾಸ್ ನೋಟಿಸ್: ರಾಣಿಬೆನ್ನೂರ ತಾಲೂಕು ಹನುಮಾಪುರದ ಮತಗಟ್ಟೆ ಮೇಲ್ವಿಚಾರಕ ಅಧಿಕಾರಿ ಗಿರೀಶ್ ಪಾಟೀಲ ಹಾಗೂ ರಾಣಿಬೆನ್ನೂರ ತಾಲೂಕು ಉಕ್ಕುಂದ ಮತಗಟ್ಟೆ ಮೇಲ್ವಿಚಾರಕ ಅಧಿಕಾರಿ ಐ.ಎಂ. ತಹಸೀಲ್ದಾರ್‌ ಅವರುಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಯಿತು.