ಸಾರಾಂಶ
ದೇವಾಂಗ ಸಮಾಜವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಪ್ರತಿಸ್ಪರ್ಧಾತ್ಮಕ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿಯೂ ಹೋರಾಡುವ ಶಕ್ತಿ ಇಲ್ಲದ ಪರಿಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು. ಇಂತಹ ಸಂದರ್ಭದಲ್ಲಿ ಹೊಸದಾಗಿ “ದೇವಾಂಗ ಕ್ರೈಸ್ತ”ರನ್ನು ೨ಎ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ಸಮಾಜಕ್ಕೆ ಮಾರಣಾಂತಿಕ ನಿರ್ಧಾರವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣವೇ ದೇವಾಂಗ ಕ್ರೈಸ್ತರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯ ಸರ್ಕಾರ ನಡೆಸುತ್ತಿರುವ ಉದ್ದೇಶಿತ ಜಾತಿ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ದೇವಾಂಗ ಸಮುದಾಯದೊಳಗೆ “ದೇವಾಂಗ ಕ್ರೈಸ್ತ” ಎಂಬ ಹೆಸರನ್ನು ಸೇರಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹಾಸನ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಕೆ.ಬಿ. ಶಂಕರ್ ಶೆಟ್ಟಿ ಖಂಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮೀಕ್ಷೆಯನ್ನು ನಡೆಸುತ್ತಿರುವ ಸರ್ಕಾರಕ್ಕೆ ಅಭಿನಂದನೆಗಳು. ಆದರೆ ಇತಿಹಾಸದಲ್ಲೇ ಇಲ್ಲದಂತಿರುವ ದೇವಾಂಗ ಕ್ರೈಸ್ತರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿರುವುದು ದಿಗ್ಭ್ರಮೆಗೊಳಿಸುವ ಕೆಲಸ. ಇದು ಇಡೀ ದೇವಾಂಗ ಸಮಾಜಕ್ಕೆ ಕೊಡಲಿಯ ಪೆಟ್ಟಿನಂತಾಗಿದೆ” ಎಂದರು.
ದೇವಾಂಗ ಸಮಾಜವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಪ್ರತಿಸ್ಪರ್ಧಾತ್ಮಕ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿಯೂ ಹೋರಾಡುವ ಶಕ್ತಿ ಇಲ್ಲದ ಪರಿಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು. ಇಂತಹ ಸಂದರ್ಭದಲ್ಲಿ ಹೊಸದಾಗಿ “ದೇವಾಂಗ ಕ್ರೈಸ್ತ”ರನ್ನು ೨ಎ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ಸಮಾಜಕ್ಕೆ ಮಾರಣಾಂತಿಕ ನಿರ್ಧಾರವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣವೇ ದೇವಾಂಗ ಕ್ರೈಸ್ತರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.ಹಿಂದೂ ಸಮುದಾಯಗಳ ಬಡ, ಆರ್ಥಿಕವಾಗಿ ದುರ್ಬಲ ಜನರನ್ನು ಕ್ರೈಸ್ತ ಮಿಷನರಿಗಳು ರಾಜ್ಯಾದ್ಯಂತ ಮತಾಂತರ ಮಾಡುತ್ತಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ ಎಂದು ಶಂಕರ್ ಶೆಟ್ಟಿ ಅಭಿಪ್ರಾಯಪಟ್ಟರು. “ಮತಾಂತರ ಕೇಂದ್ರಗಳನ್ನು ಪತ್ತೆಹಚ್ಚಿ, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಎಂ.ಎಚ್. ಕುಮಾರಶೆಟ್ಟಿ, ಆಲೇಶ್, ಲಕ್ಷ್ಮಣ್, ಪ್ರಕಾಶ್, ಚಂದ್ರಕುಮಾರ್, ತೇಜವತಿ ಸೇರಿದಂತೆ ಅನೇಕರು ಹಾಜರಿದ್ದರು.