ಸಾರಾಂಶ
ಹಾರನಹಳ್ಳಿ: ಸಮೀಪದ ಕಸಬಾ ಹೋಬಳಿಯ ತಳಲೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನ್ನಿ ಮಹಾಕಾಳಿ ಅಮ್ಮನವರ ದೇವಾಲಯದ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಬನ್ನಿ ಮಂಟಪದ ಲೋಕಾರ್ಪಣ ಕಾರ್ಯಕ್ರಮ ನೂರಾರು ಭಕ್ತರ ಸಮ್ಮಖದಲ್ಲಿ ವೈಭವದಿಂದ ನಡೆಯಿತು.ಗುರುವಾರ ಸಂಜೆ ಹಾಗೂ ಶುಕ್ರವಾರದಂದು ವಿವಿಧ ಧಾರ್ಮಿಕ ಪೂಜೆ ಕಲಾಹೋಮ, ದುರ್ಗಾ ಹೋಮ, ವಾಸ್ತು ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಮಹಿಳೆಯರಿಂದ ಗ್ರಾಮದ ಪುರಾತನ ಬಾವಿಯಲ್ಲಿ ಗಂಗೆ ಪೂಜೆ ಮಾಡಿದ ನಂತರ ಗ್ರಾಮದೇವತೆ ಬನ್ನಿಮಹಾಕಾಳಿ, ಧೂತರಾಯಸ್ವಾಮಿ, ಜಂಬುಲಿಂಗಶ್ವರ ಸ್ವಾಮಿ , ದೇವಮ್ಮ ಹಾಗೂ ಇತರ ದೇವರುಗಳನ್ನು ಉತ್ಸವದಲ್ಲಿ ಕರೆತಂದರು. ಉತ್ಸವದಲ್ಲಿ ಅರೆವಾದ್ಯ ಉತ್ಸವಕ್ಕೆ ಮೆರುಗು ನೀಡಿತ್ತು, ಗ್ರಾಮದೇವತೆಗಳು ಬನ್ನಿ ಮಂಟಪ ಪ್ರದಕ್ಷಿಣೆ ಮಾಡಿದ ನಂತರ ಬನ್ನಿ ಮಂಟಪದ ಮೇಲೆ ನೂತನವಾಗಿ ನಿರ್ಮಿಸಿದ ಮಂಟಪದಲ್ಲಿ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿದ ನಂತರ ಕುಂಭಾಭಿಷೇಕ ಸೇವೆಯನ್ನು ಬನ್ನಿ ಮಂಟಪದ ನಿರ್ಮಾಣದ ಸೇವಾರ್ಥದಾರರಾದ ಜಗದೀಶ್ ಮಾಡಿದರು.ಗ್ರಾಮ ದೇವರನ್ನು ಮಂಟಪದಲ್ಲಿ ಕೂರಿಸಿ ಮಹಾ ಮಂಗಳಾರತಿ ನಡೆಯಿತು. ಹಾಸನದ ವೇದ ವಿದ್ವಾನ್ ಎಂ.ವಿ.ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ವಿವಿಧ ಹವನ ಕಾರ್ಯಗಳು ನಡೆಯಿತು. ನಂತರ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಬನ್ನಿ ಮಂಟಪವನ್ನು ಉದ್ಘಾಟಿಸಿದರು. ಗ್ರಾಮಸ್ಥರೆಲ್ಲಾ ಸೇರಿ ಶಾಸಕರನ್ನು ಹಾಗೂ ಸೇವಾರ್ಥದಾರರಾದ ಜಗದೀಶ್ ಅವರನ್ನು ಸನ್ಮಾನಿಸಿದರು.ಈ ಸಂಧರ್ಭದಲ್ಲಿ ತಳಲೂರು ಗ್ರಾಮ ಮುಖಂಡರು ಭಕ್ತಾದಿಗಳು ಪಕ್ಕದೂರುಗಳ ಗ್ರಾಮಸ್ಥರು ಉಪಸ್ಥಿತರಿದ್ದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.