ಲಕ್ಷ್ಮೇಶ್ವರ ಪಟ್ಟಣದ ಸಿಬಿಎಸ್‌ಇ ಚಂದನ ಸ್ಕೂಲ್‌ನಲ್ಲಿ ಸ್ಕೂಲ್ ಚಂದನ ಎಜ್ಯುಕೇಶನ್ ಸೊಸೈಟಿ ಶನಿವಾರ ಆಯೋಜಿಸಿದ್ದ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಹಾಗೂ ಚಂದನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಲಕ್ಷ್ಮೇಶ್ವರ: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಮನೋಭಾವ ಬೆಳೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಶನಿವಾರ ಪಟ್ಟಣದ ಸಿಬಿಎಸ್‌ಇ ಚಂದನ ಸ್ಕೂಲ್‌ನಲ್ಲಿ ಸ್ಕೂಲ್ ಚಂದನ ಎಜ್ಯುಕೇಶನ್ ಸೊಸೈಟಿ ಆಯೋಜಿಸಿದ್ದ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಉದ್ಘಾಟನೆ ಹಾಗೂ ಚಂದನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನಕ್ಕೆ, ವೈಚಾರಿಕತೆಗೆ ಚಂದನ ಶಾಲೆ ಬಹಳ ಮಹತ್ವ ಕೊಟ್ಟಿದೆ. ನಮ್ಮ ದೇಶ ಅನೇಕ ಜಾತಿ, ಧರ್ಮಗಳಿಂದ ಕೂಡಿದೆ. ನಾವು ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಸಮ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಈ ದೇಶದಲ್ಲಿ ಅಸಮಾನತೆ ಇದ್ದು, ಅದು ಹೋಗಲಿಕ್ಕೆ ಏನು ಮಾಡಬೇಕು? ಕಂದಾಚಾರ ಬಿಡಬೇಕು. ಅದಕ್ಕೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಬೆಳೆಸಬೇಕು, ಅಂದಾಗ ಮನುಷ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಮೌಢ್ಯಗಳನ್ನು ಆಚರಿಸುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆಯನ್ನು ಸಂವಿಧಾನ ತಿಳಿಸಿದ್ದು, ಇದು ಅಕ್ಷರಶಃ ಜಾರಿಯಾಗದೇ ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಒಳ್ಳೆಯ ವ್ಯಕ್ತಿತ್ವ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್‌, ಬೌದ್ಧ, ಸಿಖ್‌ ಹೀಗೆ ಹಲವಾರು ಧರ್ಮಗಳಿವೆ, ಯಾವ ಧರ್ಮವೂ ದ್ವೇಷವನ್ನು ಹುಟ್ಟುಹಾಕಿಲ್ಲ. ಎಲ್ಲ ಧರ್ಮಗಳು ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸಬೇಕು ಎಂದು ಹೇಳುತ್ತವೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿವೆ. ಕಷ್ಟದಲ್ಲಿದ್ದಾಗ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ ಯಾವುದೇ ವರ್ಗದವರು ಕೂಡ ಸಾಧನೆ ಮಾಡಬಹುದಾಗಿದೆ. ಶಿಕ್ಷಣ ಯಾರಪ್ಪನ ಸೊತ್ತಲ್ಲ. ಪ್ರಾಮಾಣಿಕ ಪ್ರಯತ್ನ, ಅವಕಾಶ ಬಹಳ ಮುಖ್ಯ. ಅದನ್ನು ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನಕ್ಕೆ ತಲುಪಬಹುದು. ಮೌಢ್ಯಗಳನ್ನು, ಕಂದಾಚಾರಗಳನ್ನು ದೂರ ಮಾಡಬೇಕು. ವೈಚಾರಿಕತೆ, ವೈಜ್ಞಾನಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಚಂದನ್ ಸ್ಕೂಲ್‌ನ ಸಂಸ್ಥಾಪಕ ಟಿ. ಈಶ್ವರ, ಶಾಸಕ ಜಿ.ಎಸ್. ಪಾಟೀಲ, ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಬಿ.ಆರ್‌. ಯಾವಗಲ್‌, ಜಿ.ಎಸ್‌. ಗಡ್ಡದೇವರಮಠ, ರಾಮಣ್ಣ ದೊಡ್ಡಮನಿ, ಮುಖಂಡರಾದ ಸುಜಾತಾ ದೊಡ್ಡಮನಿ, ಆನಂದ ಗಡ್ಡದೇವರಮಠ ಹಾಜರಿದ್ದರು.

ಬಿ.ಎಸ್‌. ಪಾಟೀಲಗೆ ಚಂದನಶ್ರೀ ಪ್ರಶಸ್ತಿ: ರೈತ ಕುಟುಂಬದಿಂದ ಬಂದು ವಿದ್ಯಾಭ್ಯಾಸ ಮಾಡಿ ಸೈನ್ಯ ಸೇರಿ ಆನಂತರ ಐಎಎಸ್ ಅಧಿಕಾರಿಯಾಗಿದ್ದ ಬಿ.ಎಸ್. ಪಾಟೀಲ ಅವರಿಗೆ ಚಂದನ ಶ್ರೀ ಪ್ರಶಸ್ತಿ ನೀಡಿದ್ದು ಸ್ತುತ್ಯಾರ್ಹ, ಅವರಲ್ಲಿ ಇಚ್ಛಾಶಕ್ತಿ ಇದ್ದದ್ದರಿಂದ ಅಪಘಾತವಾಗಿದ್ದರೂ ಐಎಎಸ್ ಉತ್ತೀರ್ಣರಾಗಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿ.ಎಸ್. ಪಾಟೀಲ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು. ಜೆ.ಎಚ್. ಪಟೇಲ ಅವರ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚು ಕೆಲಸಗಳನ್ನು ಇವರೇ ಮಾಡಿ, ಅವರಿಗೆ ಒತ್ತಡ ಇಲ್ಲದಂತೆ ಮಾಡುತ್ತಿದ್ದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಲು ಪಾಟೀಲ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈಗಲೂ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ವರದಿ ಸಲ್ಲಿಸಿದ್ದಾರೆ. ಗ್ರೇಟರ್ ಬೆಂಗಳೂರಿನ ಒಳಗೆ ಐದು ಕಾರ್ಪೊರೇಷನ್‌ಗಳನ್ನಾಗಿ ವಿಭಜಿಸಲಾಗಿದೆ. ಪಾಟೀಲ ಅವರು ಈ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗುರುತಿಸಿ ಚಂದನ ಎಜ್ಯುಕೇಶನಲ್ ಸಂಸ್ಥೆ 2025 ನೇ ಸಾಲಿನ ಚಂದನ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದರು.

ಅಪರೂಪದ ವಿಜ್ಞಾನಿ: ಸಿ.ಎನ್.ಆರ್‌. ರಾವ್ ದೇಶ ಕಂಡ ಅಪರೂಪದ ವಿಜ್ಞಾನಿ. ಅವರು ಕೂಡಾ ಹಳ್ಳಿಯಿಂದ ಬಂದವರು. ಎಸ್‌ಎಸ್‌ಎಲ್‌ಸಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿದವರು. ಆನಂತರ ಇಂಗ್ಲಿಷ್ ಮಾಧ್ಯಮಕ್ಕೆ ಬಂದಿದ್ದೆ ಎಂದು ಹೇಳಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದವರು ರಾವ್ ಅವರು. ಅವರ ಧರ್ಮಪತ್ನಿ ನಮ್ಮ ಮೈಸೂರು ಜಿಲ್ಲೆಯವರು. ಶ್ರೀಮತಿಯವರಿಂದ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ರಾವ್ ಅವರು ಹೇಳುತ್ತಿದ್ದರು. ವಿಜ್ಞಾನವನ್ನು ತಮ್ಮ ಜೀವನವನ್ನಾಗಿ ಮಾಡಿಕೊಂಡಿದ್ದರು. ಅದಕ್ಕೆ ಅಷ್ಟು ಅಪಾರವಾದ ಸಾಧನೆಯನ್ನು ಸಿ.ಎನ್.ಆರ್. ರಾವ್ ಅವರು ಮಾಡಿದ್ದಾರೆ ಎಂದರು.