ಸಾರಾಂಶ
ಸೋಮವಾರ ರೋಣ ತಾಪಂ ಸಭಾ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ರೋಣ-ಗಜೇಂದ್ರಗಡ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜರುಗಿದ ತರಬೇತಿ ಕಾರ್ಯಾಗಾರದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಶ್ಯಾಮ ಸುಂದರ ಪಾಲಿವಾಲ ಗ್ರಾಪಂ ಅಧ್ಯಕ್ಷರ ಜೊತೆಗೆ ಸಮಾಲೋಚನೆ ಹಾಗೂ ಸಂವಾದ ನಡೆಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷರ ಜತೆಗೆ ಡಾ. ಪಾಲಿವಾಲ ಸಂವಾದ
ರೋಣ:ಗ್ರಾಮ ಪಂಚಾಯಿತಿ ಅಧ್ಯಕ್ಷರು ಕ್ರಿಯಾಶೀಲರಾಗಿ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಅಧಿಕಾರಿಗಳ ಜೊತೆಗೂಡಿ ಕಾರ್ಯ ನಿರ್ವಹಿಸಿದಲ್ಲಿ ಗ್ರಾಮದ ಅಭಿವೃದ್ಧಿ ಜೊತೆಗೆ ದೇಶವೇ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಡಾ. ಶ್ಯಾಮ ಸುಂದರ ಪಾಲಿವಾಲ ಹೇಳಿದರು. ಅವರು ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ರೋಣ-ಗಜೇಂದ್ರಗಡ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜರುಗಿದ ತರಬೇತಿ ಕಾರ್ಯಾಗಾರದಲ್ಲಿ ಗ್ರಾಪಂ ಅಧ್ಯಕ್ಷರ ಜೊತೆಗೆ ಸಮಾಲೋಚನೆ ಹಾಗೂ ಸಂವಾದ ನಡೆಸಿ ಮಾತನಾಡಿದರು. ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ಗ್ರಾಪಂ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಯಾವಾಗ ಪ್ರಾಮಾಣಿಕ ಕೆಲಸ ಮಾಡುತ್ತಾರೋ ಅಂತವರು ದೇವರಿಗೂ ಸಹ ಹೆದರುವ ಅವಶ್ಯಕತೆ ಇಲ್ಲಾ. ಗ್ರಾಮಗಳ ಸರ್ವಾಂಗೀಣ ಪ್ರಗತಿಯಲ್ಲಿ ಆಯಾ ಗ್ರಾಪಂ ಅಧ್ಯಕ್ಷರ ಸಹಭಾಗಿತ್ವ ಸಕ್ರಿಯವಾಗಿರಬೇಕು.ರಾಜಸ್ಥಾನದ ರಾಜ್ಯದ ಪಿಪಲಾಂತ್ರಿ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ 111 ಗಿಡಗಳನ್ನು ನೆಡುವ ಮೂಲಕ ಹಬ್ಬದ ವಾತಾವರಣ ಏರ್ಪಡಿಸುತ್ತೇವೆ. ಅದಕ್ಕೆ ಮುಖ್ಯ ಕಾರಣ ಪರಿಸರ ಸಂರಕ್ಷಣೆ ಜೊತೆಗೆ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟವುದು ನಮ್ಮ ಪ್ರಮುಖ ಗುರಿಯಾಗಿತ್ತು. ಜೊತೆಗೆ ಪಿಪಲಾಂತ್ರಿ ಗ್ರಾಮದಲ್ಲಿ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಪರಿಸರ ಸಂರಕ್ಷಣೆ ಯಾವ ಪ್ರಮಾಣದಲ್ಲಿ ಆಗಿದೆ ಅಂದರೆ ಗ್ರಾಮದಲ್ಲಿ ಮೊದಲು 2000 ಅಡಿ ಕೊರಸಿದಾಗ ನೀರು ಬರುತ್ತಿತ್ತು, ಸದ್ಯ 15ರಿಂದ 20 ಅಡಿಗೆ ನೀರು ಬರುತ್ತದೆ. ಅಷ್ಟರ ಮಟ್ಟಿಗೆ ಪರಿಸರದ ಜೊತೆಗೆ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದರು.ಪ್ರತಿ ಗ್ರಾಮ ಪಂಚಾಯತಿ ಅಧ್ಯಕ್ಷರು ಒಂದು ರುಪಾಯಿ ಮನೆಯಿಂದ ಒಯ್ಯಲುಬಾರದು, ಗ್ರಾಮ ಪಂಚಾಯಿತಿಯಿಂದ ಬರುವಾಗ ತರಲುಬಾರದು, ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಪ್ರಾಮಾಣಿಕ ಕೆಲಸ ಮಾಡಿದರೆ ನಿಮ್ಮ ಗ್ರಾಮದಲ್ಲಿ ಏನಾದರೂ ಅಭಿವೃದ್ಧಿ ಮಾಡಲು ಸಾಧ್ಯ ಎಂದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಹಲವು ರಸ್ತೆ, ಸಮುದಾಯ ಭವನ ಸೇರಿದಂತೆ ಹಲವಾರು ಕೆಲಸ ಎಲ್ಲರೂ ಮಾಡುತ್ತಾರೆ. ಆದರೆ ನೀವು ಮಾಡಿದ ಕೆಲಸ ನಿಮಗೆ ತೃಪ್ತಿ ಕೊಡಬೇಕು ಎಂದರು. ರೋಣ ತಾಪಂ ಇಒ ರವಿ.ಎ.ಎನ್. ಮಾತನಾಡಿ, ನನ್ನ ಊರಿಗೆ ಯಾವ ಕಾಮಗಾರಿ ಬೇಕು, ಯಾವುದು ಅವಶ್ಯಕತೆ ಇದೆ ಅಂತಾ ಅಧ್ಯಕ್ಷರು ಪರಿಶೀಲಿಸಿ ಅದನ್ನು ಕಾರ್ಯಗತಗೊಳಿಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದರು.ಶ್ಯಾಮಸುಂದರಗೆ ಹಲವು ಪ್ರಶಸ್ತಿ: ಮೂಲತಃ ರಾಜಸ್ಥಾನ ರಾಜ್ಯದ ಉದಯಪುರ ಜಿಲ್ಲೆಯ ಪಿಪಲಾಂತ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಶ್ಯಾಮಸುಂದರ ಪಾಲಿಮಾರ ಅವರು, ಕಳೆದ 30 ವರ್ಷಗಳ ಅವಧಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತು ಗ್ರಾಮದಲ್ಲಿ ಸಾಕಷ್ಟು ಕೆಲಸ ಮಾಡಿ ಮಹತ್ವದ ಬದಲಾವಣೆಗೆ ಶ್ರಮಿಸಿದ್ದಾರೆ. ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ. ಅಪಾರ ಜನಪ್ರಿಯತೆ ಪಡೆದುಕೊಂಡಿರುತ್ತಾರೆ.ಈ ವೇಳೆ ಪದ್ಮಶ್ರೀ ಪುರಸ್ಕೃತ ಡಾ. ಶ್ಯಾಮ ಸುಂದರ ಪಾಲಿವಾಲ ಅವರನ್ನು ತಾಪಂ ವತಿಯಿಂದ ಸನ್ಮಾನಿಸಲಾಯಿತುಈ ಸಂದರ್ಭದಲ್ಲಿ ಜಿಪಂ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕಿರಣ ಕುಮಾರ ಎಸ್.ಎಚ್, ಗಜೇಂದ್ರಗಡ ತಾಪಂ ಇಒ ಡಿ.ಮೋಹನ, ಗದಗ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಯ್ಯ, ರೋಣ ತಾಲೂಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್. ಬಿಳಗಿ, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸಿ.ಎಸ್. ನಿಲಗುಂದ, ತಾಪಂ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ರಿಯಾಜ್ ಖತೀಬ, ತಾಪಂ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಸ್ಥಿತರಿದ್ದರು.