ಶೈಕ್ಷಣಿಕ ಅಭಿವೃದ್ದಿಯ ಜೊತೆಗೆ ಸಮುದಾಯದವರು ಸಂಘಟಿತರಾದಾಗ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯ ಅಭಿವೃದ್ದಿಹೊಂದಲು ಸಾಧ್ಯವಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ನಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಮಡಿವಾಳ ಸಮುದಾಯವನ್ನು ಎಸ್.ಸಿ ಎಸ್.ಟಿ ಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಮಡಿವಾಳ ಸಮುದಾಯ ಸೇರಿದಂತೆ ಯಾವುದೇ ಸಮುದಾಯ ಶಿಕ್ಷಣದಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಡಿವಾಳ ಮಾಚಿದೇವರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅನಾದಿಕಾಲದಿಂದಲೂ ಸಮಾಜದ ಎಲ್ಲಾ ವರ್ಗಗಳ ಬಟ್ಟೆಗಳನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮಡಿವಾಳ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ ತೀರ ಹಿಂದುಳಿದ ಸಮುದಾಯವಾಗಿರುವ ಹಿನ್ನಲೆಯಲ್ಲಿ, ತಮ್ಮ

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.

ಯಾವುದೇ ಒಂದು ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಸಮುದಾಯದ ಮಕ್ಕಳ ಶಿಕ್ಷಣದ ವಿಚಾರದಲ್ಲಿ ನನ್ನ ಸಹಕಾರ ಯಾವಾಗಲು ಇರುತ್ತದೆ ಎಂದರು. ಮಡಿವಾಳ ಮತ್ತು ಸವಿತಾ ಸಮುದಾಯದವರನ್ನು ಎಸ್.ಸಿ ಮತ್ತು ಎಸ್.ಟಿ ಪಟ್ಟಿಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡಹೇರುವುದಾಗಿ ಭರವಸೆ ನೀಡಿದರು.

ಮಡಿವಾಳ ಮಾಚಿದೇವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜದಲ್ಲಿ ನಡೆಯುತ್ತಿದ್ದ ಜಾತಿ ಪದ್ದತಿ, ಬಾಲ್ಯ ವಿವಾಹ ಇತ್ಯಾದಿ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ನಡೆಸಿದ ಮಹನೀಯರ ಮಾರ್ಗದರ್ಶನ, ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಬಿ.ಎಸ್.ಸುರೇಶ್ ಮಾತನಾಡಿ, ಮಡಿವಾಳರು ಅನಾದಿಕಾಲದಿಂದಲೂ ತಮ್ಮ ಕುಲವೃತ್ತಿಯಾಗಿರುವ ಬಟ್ಟೆ ಸ್ವಚ್ಚಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದರು, ಆದರೆ ಕಾಲಕ್ರಮೇಣ ಬಟ್ಟೆ ಒಗೆಯುವ ಯಂತ್ರಗಳು, ವಿದ್ಯುತ್ ಐರನ್ ಬಾಕ್ಸ್ ಇತ್ಯಾದಿ ಉಪಕರಣಗಳು ಮಾರುಕಟ್ಟೆಗೆ ಬಂದ ನಂತರ ಇತರೆ ಯಾವುದೇ ಕೆಲಸಗಳನ್ನು ಅವಲಂಬಿಸಲು ಸಾಧ್ಯವಾಗದೇ ನಮ್ಮ ಕುಲ ವೃತ್ತಿಗೆ ಹಿನ್ನಡೆಯಾಗಿ ಆರ್ಥಿಕವಾಗಿ ಹಿಂದುಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಶೈಕ್ಷಣಿಕ ಅಭಿವೃದ್ದಿಯ ಜೊತೆಗೆ ಸಮುದಾಯದವರು ಸಂಘಟಿತರಾದಾಗ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯ ಅಭಿವೃದ್ದಿಹೊಂದಲು ಸಾಧ್ಯವಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ನಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಮಡಿವಾಳ ಸಮುದಾಯವನ್ನು ಎಸ್.ಸಿ ಎಸ್.ಟಿ ಪಟ್ಟಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮನೀಷಾ ಎನ್ ಪತ್ರಿ, ಪುರಸಭೆ ಅಧ್ಯಕ್ಷ ಎ ಶ್ರೀನಿವಾಸ್, ಸದಸ್ಯ ಎ.ನಂಜುಂಡಪ್ಪ, ಬಿಸಿಎಂ ಇಲಾಖೆ ಅಧಿಕಾರಿ ಶಿವಣ್ಣ ಸಮುದಾಯದ ಮುಖಂಡರಾದ ಹೆಚ್.ವಿ.ನಾಗರಾಜ್, ಎನ್. ಶಿವಣ್ಣ, ಕ್ರಿಕೆಟ್ ಮೂರ್ತಿ ಮತ್ತಿತರರು ಇದ್ದರು.