ಎರಡು ವರ್ಷಗಳಿಂದ ನಾಲೆಗಳ ಬಳಿ ಸರಣಿ ದುರಂತಗಳು

| Published : Feb 04 2025, 12:33 AM IST

ಎರಡು ವರ್ಷಗಳಿಂದ ನಾಲೆಗಳ ಬಳಿ ಸರಣಿ ದುರಂತಗಳು
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ತಿಬ್ಬನಹಳ್ಳಿಯ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿಬಿದ್ದು ಮೂವರು ಸಾವನ್ನಪ್ಪಿರುವ ಸ್ಥಳದಲ್ಲೇ ಎರಡು ವರ್ಷಗಳ ಹಿಂದೆ ಕಾರೊಂದು ಉರುಳಿಬಿದ್ದ ಘಟನೆ ಸಂಭವಿಸಿತ್ತು. ೨೦೨೩ರ ಜುಲೈ ೨೭ರಂದು ಕ್ರೆಟಾ ಕಾರೊಂದು ಮಾಚಹಳ್ಳಿಯ ವಿಶ್ವೇಶ್ವರಯ್ಯ ನಾಲೆಗೆ ಉರುಳಿತ್ತು. ಕಾರು ಪಲ್ಟಿಯಾಗಿ ಕಾರು ಚಾಲಕ ನಾಪತ್ತೆಯಾಗಿದ್ದ. ಈಗ ಮತ್ತೆ ಅಲ್ಲೇ ಮತ್ತೊಂದು ದುರ್ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪಾಂಡವಪುರ ತಾಲೂಕಿನ ತಿಬ್ಬನಹಳ್ಳಿಯ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿಬಿದ್ದು ಮೂವರು ಸಾವನ್ನಪ್ಪಿರುವ ಸ್ಥಳದಲ್ಲೇ ಎರಡು ವರ್ಷಗಳ ಹಿಂದೆ ಕಾರೊಂದು ಉರುಳಿಬಿದ್ದ ಘಟನೆ ಸಂಭವಿಸಿತ್ತು.

೨೦೨೩ರ ಜುಲೈ ೨೭ರಂದು ಕ್ರೆಟಾ ಕಾರೊಂದು ಮಾಚಹಳ್ಳಿಯ ವಿಶ್ವೇಶ್ವರಯ್ಯ ನಾಲೆಗೆ ಉರುಳಿತ್ತು. ಕಾರು ಪಲ್ಟಿಯಾಗಿ ಕಾರು ಚಾಲಕ ನಾಪತ್ತೆಯಾಗಿದ್ದ. ಈಗ ಮತ್ತೆ ಅಲ್ಲೇ ಮತ್ತೊಂದು ದುರ್ಘಟನೆ ನಡೆದಿದೆ. ೨೦೨೩ರ ಜೂನ್ ೪ರಂದು ಕಾರೊಂದು ನಾಲೆಗೆ ಉರುಳಿತ್ತು. ನಾಲೆಯಲ್ಲಿ ನೀರಿನ ಹರಿವು ಹೆಚ್ಚಿಲ್ಲದಿದ್ದರಿಂದ ಕಾರಿನಲ್ಲಿದ್ದ ನಾಲ್ವರನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಿ ಮಾನವೀಯತೆ ಮೆರೆದಿದ್ದರು. ಕಾರಿನಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು.

ಎರಡು ವರ್ಷಗಳಿಂದ ಸರಣಿ ಅವಘಡಗಳು:

ಮಂಡ್ಯ ಜಿಲ್ಲೆಯ ವಿಸಿ ನಾಲೆಯ ಮಾರ್ಗದಲ್ಲಿ ಹಲವಾರು ಕಡೆ ಕಾರುಗಳು, ವಾಹನಗಳು ನಾಲೆಗೆ ಉರುಳಿ ಅನೇಕರು ಜೀವ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ವಿಸಿ ನಾಲೆಯ ಹಲವು ಕಡೆ ತಡೆಗೋಡೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

೨೦೧೮ ನವೆಂಬರ್ ತಿಂಗಳಿನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿಯ ವಿಸಿ ನಾಲೆಯಲ್ಲಿ ಬಸ್ ಅಪಘಾತಕ್ಕೆ ಒಳಗಾಗಿ ೩೦ ಜನ ಸಾವನ್ನಪಿದ್ದರು. ೨೦೨೩ರ ಜುಲೈ ೨೭ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ಕಾರು ವಿಸಿ ನಾಲೆಗೆ ಪಲ್ಟಿಯಾಗಿ, ಚಾಲಕ ಲೋಕೇಶ್ ನಾಪತ್ತೆಯಾಗಿದ್ದಾರೆ. ಮಳೆಯಿಂದ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಕಾರಣ, ಕಾರು ಸಂಪೂರ್ಣ ಮುಳುಗಡೆಯಾಗಿತ್ತು. ೨೦೨೩ರ ಜುಲೈ ೨೯ರಂದು, ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಕಾರು ವಿಸಿ ನಾಲೆಗೆ ಬಿದ್ದು, ನಾಲ್ವರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ ೨ ಲಕ್ಷ ರು. ಪರಿಹಾರ ಘೋಷಿಸಲಾಗಿತ್ತು.

೨೦೨೩ರ ನವೆಂಬರ್ ೭ರಂದು ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ಕಾರು ವಿಸಿ ನಾಲೆಗೆ ಬಿದ್ದು, ಐವರು ಧಾರುಣವಾಗಿ ಸಾವನ್ನಪ್ಪಿದ್ದರು. ಕಾರು ಮೈಸೂರಿನಿಂದ ಭದ್ರಾವತಿಗೆ ತೆರಳುವಾಗ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿತ್ತು. ೨೦೨೪ರ ಮಾ. ೧೨ರಂದು ಮಂಡ್ಯದ ಅವ್ವೇರಹಳ್ಳಿ ಗ್ರಾಮದ ಬಳಿ ಸ್ವಿಫ್ಟ್ ಕಾರೊಂದು ನಾಲೆಯೊಳಗೆ ಬಿದ್ದಿತ್ತು. ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.