ತಾಲೂಕಿಗೆ ಏಳು ಗಂಟೆ ವಿದ್ಯುತ್ ನೀಡಲು ಚಿಂತನೆ

| Published : Feb 04 2025, 12:33 AM IST

ಸಾರಾಂಶ

ಸರ್ಕಾರ ರೈತರಿಗೆ ವಿದ್ಯುತ್, ನೀರನ್ನು ಸಮರ್ಪಕವಾಗಿ ಒದಗಿಸಲು ಹಲವು ಕ್ರಮ ಕೈಗೊಂಡಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರ ರೈತರಿಗೆ ವಿದ್ಯುತ್, ನೀರನ್ನು ಸಮರ್ಪಕವಾಗಿ ಒದಗಿಸಲು ಹಲವು ಕ್ರಮ ಕೈಗೊಂಡಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ತಾಲೂಕಿನ ಕರಡಾಳು ಗ್ರಾಮದಲ್ಲಿ ಕೆಪಿಟಿಸಿಎಲ್‌ದಿಂದ ನಿರ್ಮಿಸಿರುವ ೧೧೦/೧೧ ಕೆವಿ ಉಪಸ್ಥಾವರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯುತ್ ಸಮಸ್ಯೆಯಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿತ್ತು, ಇದನ್ನು ಮನಗಂಡು ಕರಡಾಳು ಗ್ರಾಮದಲ್ಲಿ ಉಪಸ್ಥಾವರ ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಮೀಸೆ ತಿಮ್ಮನಹಳ್ಳಿಯಲ್ಲಿ ೨೨೦ ಕೆವಿ ವಿದ್ಯುತ್ ಸ್ಥಾವರವನ್ನು ನಿರ್ಮಿಸುವ ಬಗ್ಗೆ ಜಾಗ ಗುರುತಿಸಿ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ನಡೆಯಲಿದೆ ಎಂದರು.

ತಾಲೂಕಿನಲ್ಲಿ ಮೂರು ಕಡೆ ೧೧೦ ಕೆವಿ ಪವರ್ ಸ್ಟೇಷನ್‌ಗಳಿದ್ದು ಇದರಿಂದ ವಿದ್ಯುತ್ ಅಭಾವ ಕಡಿಮೆಯಾಗಲಿದ್ದು ತಾಲೂಕಿಗೆ ೭ ಗಂಟೆ ವಿದ್ಯುತ್ ನೀಡುವ ಚಿಂತನೆ ಮಾಡಲಾಗಿದೆ. ಹೇಮಾವತಿ ಜೊತೆಗೆ ಎತ್ತಿನಹೊಳೆ ಮತ್ತು ಭದ್ರಾ ಮೂಲಕ ತಾಲೂಕಿನ ೧೧೦ ಕೆರೆಗಳಿಗೆ ನೀರು ಹರಿಸಲಾಗುವುದು. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟ ದೆಹಲಿಗೆ ಭೇಟಿ ನೀಡಲಿದೆ ಎಂದರು.

ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ ಮಾತನಾಡಿ, ಕರಡಾಳು ಗ್ರಾಮದಲ್ಲಿ 2 ಎಕರೆ ಸರ್ಕಾರಿ ಜಾಗದಲ್ಲಿ ₹೧೪ ಕೋಟಿ ಈ ಉಪಸ್ಥಾವರ ನಿರ್ಮಿಸಲಾಗಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತವಾಗಿ ೭ತಾಸು ವಿದ್ಯುತ್ ನೀಡಬಹುದಾಗಿದೆ. ಜಿಲ್ಲೆಗೆ ೧೨೦೦ ಮೆಗಾವ್ಯಾಟ್ ವಿದ್ಯುತ್ ಬೇಕಿದ್ದು ತಿಪಟೂರಿಗೆ ಶೇ.೩೦ರಷ್ಟು ಅವಶ್ಯಕತೆ ಇದ್ದು ಕೆ.ಬಿ. ಕ್ರಾಸ್‌ನಲ್ಲಿರುವ ೨೨೦ಕೆ.ವಿ ಪವರ್ ಸ್ಟೇಷನ್ ಓವರ್ ಲೋಡ್ ಆಗಿದ್ದು ಮೀಸೆ ತಿಮ್ಮನಹಳ್ಳಿಯಲ್ಲಿ ಮತ್ತೊಂದು ೨೨೦ಕೆವಿ ಸ್ಟೇಷನ್ ಮಂಜೂರಾಗಿದ್ದು ಕೆಲಸ ಪ್ರಾರಂಭವಾಗಲಿದೆ. ಬಿದರೆಗುಡಿ, ಬಳುವನೇರಲು, ತಡಸೂರು ಕಡೆ ೧೧೦ಕೆವಿ ಪವರ್ ಸ್ಟೇಷನ್ ಸ್ಥಾಪಿಸುವ ಉದ್ದೇಶವಿದೆ. ಗೋಪುರ ನಿರ್ಮಾಣ, ಲೈನ್ ಎಳೆಯಲು ಜಾಗದ ಅವಶ್ಯಕತೆ ಇದೆ ಎಂದರು.

ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ಡಿ.ಶಿವಕುಮಾರ್, ಜಿ.ಸೋಮಶೇಖರಗೌಡ, ಸೈಯದ್, ಮನೋಹರ್, ನರಸಿಂಹಮೂರ್ತಿ, ಸುದರ್ಶನ್, ಗಾಯತ್ರಿ, ಮಂಜುಳಾ, ದರ್ಶನ್ ಇದ್ದರು.