ಕನ್ನಡಪ್ರಭ ವಾರ್ತೆ ಬೆಳಗಾವಿ

ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ರಥೋತ್ಸವ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ವೈಭವವಾಗಿ ನೆರವೇರಿತು. ಗ್ರಾಮವೇ ಭಂಡಾರಮಯ ವಾತಾವರಣದಲ್ಲಿ ಮಿಂಚಿ, ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಹರಿದು ಬಂದಿದ್ದರು.

ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರ ಕಾರ್ಯಕ್ರಮಗಳು ನೆರವೇರಿದವು. ನಂತರ ಸಡಗರದ ನಡುವೆ ಅಲಂಕೃತ ರಥದಲ್ಲಿ ತಾಯಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಜೈ ಮಹಾಲಕ್ಷ್ಮೀ ಘೋಷಣೆಗಳ ನಡುವೆ ರಥವನ್ನು ಎಳೆಯುತ್ತ ಭಕ್ತಿ ವ್ಯಕ್ತಪಡಿಸಿದರು. ರಥೋತ್ಸವದ ಸಂದರ್ಭದಲ್ಲಿ ಗ್ರಾಮದೆಲ್ಲೆಡೆ ಭಂಡಾರ, ಪ್ರಸಾದ ವಿತರಣೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು ಪೂಜೆ ಸಲ್ಲಿಸಿ ಕುಟುಂಬದ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಗ್ರಾಮದ ಈ ಮಹೋತ್ಸವ ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಉಲ್ಲಾಸ ನೀಡಿದ್ದು, ಪರಂಪರೆಯ ವೈಭವವನ್ನು ಮತ್ತೊಮ್ಮೆ ನೆನಪಿಸಿತು.