ಮಡಿಕೇರಿ: ಶ್ರೀಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ೩೭ನೇ ವರ್ಷದ ಶ್ರೀ ರಾಮೋತ್ಸವ ಹಾಗೂ ದ್ವಿತೀಯ ವರ್ಷದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.

ನಗರದ ಬೀದಿಬೀದಿಗಳಲ್ಲಿ ರಾಮಭಜನೆ ಅನುರಣಿಸಿತು. ರಾಮನವಮಿಯ ಬೃಹತ್ ಮೆರವಣಿಗೆಯಲ್ಲಿ ಸಾವಿರಾತು ಮಂದಿ ಹೆಜ್ಜೆ ಹಾಕಿದರು. ಮಕ್ಕಳೂ ದಾರಿಯುದ್ದಕ್ಕೂ ಭಜನೆ ಹಾಡುತ್ತಾ, ನರ್ತಿಸುತ್ತಾ ಸಾಗಿದ್ದು ವಿಶೇಷ ಎನಿಸಿತು. ಅನೇಕ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಇದೆಲ್ಲಕ್ಕೂ ಕಿರೀಟಪ್ರಾಯವಾಗಿ ಪಲ್ಲಕ್ಕಿಯಲ್ಲಿರಿಸಿದ ಕೋದಂಡರಾಮನ ಉತ್ಸವ ಮೂರ್ತಿಯನ್ನು ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಪಾರ ಜನಸ್ತೋಮ ಕಣ್ಣುಂಬಿಕೊಂಡರು. ಗಾಂಧಿ ಮೈದಾನದಿಂದ ಹೊರಟ ಮೆರವಣಿಗೆ ಮಹದೇವಪೇಟೆಯ ಮುಖ್ಯರಸ್ತೆ, ಬನ್ನಿಮಂಟಪದವರೆಗೆ ತೆರಳಿ ಅಲ್ಲಿಂದ ಕೋದಂಡ ರಾಮ ದೇವಾಲಯವನ್ನು ಸೇರಿತು.ಕೋದಂಡ ರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಚ್.ಎನ್.ನಂಜುಂಡ, ಪ್ರಧಾನ ಸಲಹೆಗಾರ ಜಿ.ರಾಜೇಂದ್ರ, ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರಾದ ಅಂಬೆಕಲ್ ನವೀನ್, ಸವಿತಾ ರಾಕೇಶ್, ಡಾ.ಎಸ್.ಎಂ.ಧನಂಜಯ್, ಗೌರವ ಅಧ್ಯಕ್ಷರಾದ ಕೋಲೆಯಂಡ ನಿಶಾ ಮೋಹನ್, ಖಜಾಂಚಿ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಜಯಂತಿ ಶೆಟ್ಟಿ, ನಗರಸಭೆ ಅಧ್ಯಕ್ಷೆ ಕಲಾವತಿ, ಸದಸ್ಯರಾದ ಕೆ.ಎಸ್.ರಮೇಶ್, ಅರುಣ್‌ಶೆಟ್ಟಿ, ಬಿ.ವೈ.ರಾಜೇಶ್ ಭಾಗವಹಿಸಿದ್ದರು.

ಶುಕ್ರವಾರ ಬೆಳಿಗ್ಗೆ ೮ ಗಂಟೆಯಿಂದ ದೇವಾಲಯದ ಆವರಣದಲ್ಲಿ ಕ್ಷೇತ್ರ ತಂತ್ರಿಯವರಾದ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯ ಅವರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಮತ್ತು ದೇವಾಲಯದ ಪುನರ್ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಗಳು ನಡೆಯಿತು. ನಂತರ ಗುರು ಗಣಪತಿ ಹೋಮ, ಮಹಾ ಸಂಕಲ್ಪ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ತತ್ವಕಲಾ ಹೋಮ, ಶಾಂತಿ ಹೋಮ, ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ನವಕ ಪ್ರಧಾನ, ಕಲಶಾಬಿಷೇಕ, ಕುಂಭಾಭಿಷೇಕ ನಡೆಯಿತು. ಪುನರ್ ಪ್ರತಿಷ್ಠಾಪನಾ ಉತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಅನ್ನಧಾನ ಏರ್ಪಡಿಸಲಾಗಿತ್ತು.