ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಜನೋಪಯೋಗಿ ಕಾರ್ಯ

| Published : Dec 22 2024, 01:32 AM IST

ಸಾರಾಂಶ

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಈ ತಾಲೂಕಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಿವೆ

ಮುಂಡರಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ಸೇರಿದಂತೆ ನಮ್ಮ ಭಾಗಗಳಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕೋಟ್ಯಂತರ ಧನಸಹಾಯ ಮಾಡುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶನಿವಾದ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಮುಂಡರಗಿ ತಾಲೂಕು ವತಿಯಿಂದ ತಾಲೂಕು ಮಟ್ಟದ ಮಹಿಳಾ ಸಮಾವೇಶ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ನಿರಾಶ್ರಿತರಿಗೆ ಮನೆ ನಿರ್ಮಾಣ, ವಿದ್ಯಾರ್ಥಿ ವೇತನ,ಶುದ್ಧ ಕುಡಿಯುವ ನೀರಿಗಾಗಿ ಶುದ್ದ ಗಂಗಾ ಘಟಕ, ದೇವಸ್ಥಾನಗಳ ಜೀರ್ನೋದ್ಧಾರ, ಜ್ಞಾನದೀಪ ಯೋಜನೆಯಡಿಯಲ್ಲಿ ಅತಿಥಿ ಶಿಕ್ಷಕರ ನೇಮಕ, ಕುಡಿತ ಬಿಡಿಸುವುದಕ್ಕಾಗಿ ಮಧ್ಯವರ್ಜನ ಶಿಬಿರ ಸೇರಿದಂತೆ ಅನೇಕ ಜನೋಪಯೋಗಿ, ಜನಪರ‌ ಕಾರ್ಯಕ್ರಮಗಳನ್ನು ಮಾಡುತ್ತಾ ಗ್ರಾಮೀಣ ಜನರ ಏಳಿಗೆಗಾಗಿ ಶ್ರಮಿಸುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮೂಡುತ್ತಾ ಬಂದಿದ್ದಾರೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಈ ತಾಲೂಕಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಿವೆ.

ಈ ಯೋಜನೆಯಡಿಯಲ್ಲಿ 1434 ಸಂಘಗಳು ಇವೆ. ಮಹಿಳೆಯರು ಕಟ್ಟಿದ ಹಣ ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ನೀಡಲಾಗುತ್ತಿದೆ. ಸಂಘಗಳಿಂದ ಬಂದಂತಹ ಲಾಭದಿಂದ ಕೃಷಿ ಚಟುವಟಿಕೆಗಳಿಗೂ ಸಹ ಧನ ಸಹಾಯ ಮಾಡಲಾಗುತ್ತಿದೆ. ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಟ್ರೈಲರಿಂಗ್, ರೊಟ್ಟಿ ತಯಾರಿಕೆ, ಚಟ್ನಿ ತಯಾರಿಕೆ ಸೇರಿದಂತೆ ಸ್ವಯಂ ಉದ್ಯೋಗ ಮಾಡಲು ಹಣಕಾಸಿನ ನೆರವು ನೀಡಲಾಗುತ್ತಿದೆ.ಇದರಿಂದ ಮಹಿಳೆಯರು ಸ್ವಯಂ ಉದ್ಯೋಗ ಮಾಡಿಕೊಂಡು ಯಶಸ್ವಿಯಾಗಿದ್ದಾರೆ ಎಂದರು.

ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಇಂದು ಕೂಡು ಕುಟುಂಬಗಳು ಮಾಯವಾಗಿ ನಾನು ಮತ್ತು ನೀನು ಎನ್ನುವುದು ಹೆಚ್ಚಾಗಿದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಅರಿತುಕೊಳ್ಳಬೇಕು.ಎಲ್ಲರೂ ಸೇರಿ ಸಹಬಾಳ್ವೆ ನಡೆಸುವುದೇ ಕುಟುಂಬದ ಮೂಲ ಮಂತ್ರವಾಗಿದೆ ಎಂದರು.

ಗದಗ ಜಿಲ್ಲಾ ಬಿ.ಸಿ.ಟ್ರಸ್ಟ್‌ ನಿರ್ದೇಶಕ ಎ.ಯೋಗೀಶ, ಪ್ರೊ. ಕಾವೇರಿ ಬೋಲಾ ಸಾಮಾಜಿಕ ಜಾಲತಾಣಗಳು ವರವೋ, ಶಾಪವೋ ವಿಷಯವಾಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೇಮಗಿರೀಶ ಹಾವಿನಾ‍ಳ, ಎ.ಕೆ. ಮುಲ್ಲಾನವರ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಜಿವಿಕೆ ಸಮನ್ವಯಾಧಿಕಾರಿ ಮಂಜುಳಾ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕ್ಷೇತ್ರ ಯೋಜನಾಧಿಕಾರಿ ವಿಶಾಲ ಮಲ್ಲಾಪೂರ ಸ್ವಾಗತಿಸಿ, ಭೀಮಾ ನಾಯಕ ನಿರೂಪಿಸಿದರು.