ಯಲಬುರ್ಗಾ: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಸೌಲಭ್ಯ ಹಾಗೂ ಬಾಕಿ ಪರಿಹಾರ ನ್ಯಾಯಸಮ್ಮತವಾಗಿ ಒದಗಿಸುವಂತೆ ಒತ್ತಾಯಿಸಿ ರೈತರು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಿಬ್ಬಂದಿ ಮಾರುತಿಗೆ ಮನವಿ ಸಲ್ಲಿಸಿದರು.
ಚಿಕ್ಕ ಮ್ಯಾಗೇರಿ, ಮಲಕಸಮುದ್ರ, ಕೂಡಗುಂಟಿ ಹಾಗೂ ಕುದ್ರಿಕೊಟಗಿ ರೈತರ ಪರವಾಗಿ ಸಲ್ಲಿಸಲಾದ ಮನವಿಯಲ್ಲಿ ಕಳೆದ ಸುಮಾರು ಎಂಟು ವರ್ಷಗಳಿಂದ ರೈತರು ನಿಯಮಿತವಾಗಿ ಬೆಳೆ ವಿಮೆ ಪ್ರೀಮಿಯಂ ಪಾವತಿಸುತ್ತಿದ್ದರೂ ವಿವಿಧ ಕಾರಣಗಳಿಂದ ಬೆಳೆ ನಷ್ಟ ಉಂಟಾದ ಸಂದರ್ಭಗಳಲ್ಲಿ ಇದುವರೆಗೆ ಯಾವುದೇ ಬೆಳೆ ವಿಮೆ ಪರಿಹಾರ ದೊರೆತಿಲ್ಲ ಎಂದು ಆರೋಪಿಸಲಾಗಿದೆ.ಹೆಸರು, ಮೆಕ್ಕೆಜೋಳ, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳು ಹಾನಿಯಾದರೂ ವಿಮೆ ಪರಿಹಾರ ದೊರೆಯದಿರುವುದು ರೈತರ ಆರ್ಥಿಕ ಸಂಕಷ್ಟ ಹೆಚ್ಚಿಸಿದೆ. ಪಕ್ಕದ ಗ್ರಾಪಂಗಳ ರೈತರಿಗೆ ಪ್ರತಿ ವರ್ಷ ಬೆಳೆ ವಿಮೆ ಪರಿಹಾರ ದೊರೆಯುತ್ತಿರುವ ಹಿನ್ನೆಲೆ ತಮ್ಮ ಗ್ರಾಪಂ ವ್ಯಾಪ್ತಿಯ ರೈತರಲ್ಲಿ ಗೊಂದಲ ಹಾಗೂ ಅಸಮಾಧಾನ ಉಂಟಾಗಿದೆ.
ಆದ್ದರಿಂದ ಚಿಕ್ಕಮ್ಯಾಗೇರಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಬೇಕು. ಇದುವರೆಗೆ ಪರಿಹಾರ ದೊರೆಯದಿರುವ ಕಾರಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅರ್ಹ ರೈತರಿಗೆ ನ್ಯಾಯಯುತವಾಗಿ ಬೆಳೆ ವಿಮೆ ಪರಿಹಾರ ದೊರೆಯುವಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಕಲ್ಲಪ್ಪ ತೊಂಡಿಹಾಳ, ಕರಿಯಪ್ಪ ಗುರಿಕಾರ, ಹನುಮಂತಪ್ಪ ಕೆರಳ್ಳಿ, ಮುದಕಪ್ಪ, ಭರಮಪ್ಪ ಕಿಳಿಕ್ಯಾತರ, ಸೋಮಲಿಂಗಪ್ಪ, ರಾಮಪ್ಪ ಗೋನಾಳ, ಬಸವರಾಜ, ಗಂಗೂರಪ್ಪ, ದೇವಪ್ಪ, ಬಸವರಾಜ ಕುದರಿಕೋಟಗಿ, ಮಲ್ಲಪ್ಪ ಹಳ್ಳಿಗುಡಿ ಸೇರಿದಂತೆ ಇತರರು ಇದ್ದರು.