ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಶ್ರದ್ಧೆ ಪ್ರಾಮಾಣಿಕತೆ ಏಕತೆಯಿಂದ ಬಡವರ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ ಗ್ರಾಮ ಲೆಕ್ಕಧಿಕಾರಿಗಳಿಗೆ ಕರೆ ನೀಡಿದರು.ಅವರು ಗುರುವಾರ ಪಟ್ಟಣದ ತಾಲೂಕು ಕಚೇರಿಯ ಶಾಸಕರ ಭವನ ಸಭಾಂಗಣದಲ್ಲಿ ಎಸ್.ಬಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡುತ್ತಾ, ಜನರು ಕೂಲಿ ಕಾರ್ಮಿಕರು ಬಡವರು ಅವಿದ್ಯಾವಂತರು ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಅಲೆಯದಂತೆ ಜರೂರಾಗಿ ಕೆಲಸ ನಿರ್ವಹಿಸಿ ಜನರು ಕೊಟ್ಟ ಅರ್ಜಿಗಳನ್ನು ತಿಂಗಳಗಟ್ಟಲೆ ಕಾಯಿಸದೆ ಕೆಲಸಮಾಡಿ. ಶಾಸಕರು ಎಸ್.ಬಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಯೊಬ್ಬ ಲೆಕ್ಕಾಧಿಕಾರಿಗಳಿಗೂ ಲ್ಯಾಪ್‌ಟಾಪ್ ವಿತರಿಸಿರುವುದು ರಾಜ್ಯದಲ್ಲಿ ಇದೇ ಪ್ರಪ್ರಥಮವಾಗಿದೆ ಎಂದರು.
ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡುತ್ತಾ ಸಿ ಬಿ ಸುರೇಶ್ ಬಾಬು ರವರು ಸರ್ಕಾರಿ ನೌಕರರಿಗೆ ಬೆಂಬಲವಾಗಿ ರೈತರ ಕಷ್ಟ ಸುಖಗಳಿಗೆ ಬೆಂಬಲಿಸುತ್ತಾ ಹಾಗೂ ಗ್ರಾಮಲೆಕ್ಕಾಧಿಕಾರಿಗಳಗೆ ಲ್ಯಾಪ್‌ಟಾಪ್ ವಿತರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಗ್ರಾಮಲೆಕ್ಕಾಧಿಕಾರಿಗಳು ತುಂಬಾ ದಿನಗಳಿಂದ ಸರ್ಕಾರವನ್ನು ಅನೇಕ ಸವಲತ್ತುಗಳಿಗಾಗಿ ರಾಜ್ಯಾದ್ಯಂತ ಚಳುವಳಿ ಆರಂಭಿಸಿದ್ದರು. ಇದನ್ನು ಮನಗಂಡು ಎಸ್.ಬಿ ಚಾರಿಟೇಬಲ್ ಟ್ರಸ್ಟ್ ನವರು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಿದ್ದು ಅಭಿನಂದನೀಯ ಎಂದರು.ಶಾಸಕರಾದ ಶ್ರೀ ಸಿ ಬಿ ಸುರೇಶ್ ಬಾಬು ಮಾತನಾಡಿ, ನಾನು 5ನೇ ಬಾರಿಗೆ ಶಾಸಕನಾಗಿದ್ದು ಬಡವರ ಏಳಿಗೆಗಾಗಿ ಬಡವರ ದನಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬಡವರ ಬೇಡಿಕೆಗಳಿಗೆ ಸದಾ ನಮ್ಮ ಟ್ರಸ್ಟ್ ಅವರ ಪರವಾಗಿ ನಿಲ್ಲುತ್ತದೆ. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಬೇಡಿಕೆಯಂತೆ ಸ್ಮಾರ್ಟ್ ಫೋನ್ ವಿತರಿಸಿರುತ್ತೇನೆ. ಪ್ರತಿ ಸೋಮವಾರ ರೈತರಿಗೆ ಕೂಲಿಕಾರ್ಮಿಕರಿಗೆ ದಲಿತರಿಗೆ ಅನುಕೂಲವಾಗುವಂತೆ ಜನಸ್ಪಂದನ ಕಾರ್ಯಕ್ರಮವನ್ನು ನಡೆಸುತ್ತಿದ್ದು 73ನೇ ವಾರಕ್ಕೆ ಕಾಲಿಟ್ಟಿದ್ದೇವೆ. ಇದರಿಂದ ಅನೇಕ ಜನರಿಗೆ ತುಂಬಾ ಅನುಕೂಲವಾಗಿದ್ದು, ಪೌತಿ ಖಾತೆ, ವಯಸ್ಕರರಿಗೆ ಪೆನ್ಶನ್ ಮುಂತಾದ ಕೆಲಸಗಳಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನಿರ್ವಹಿಸುತ್ತಿದ್ದೇನೆ. ಇನ್ನು ಮುಂದೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಅಧಿಕಾರಿಗಳನ್ನು ಒಳಗೊಂಡಂತೆ ಪ್ರತಿ ಶನಿವಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಎಮ್.ಎನ್ ಸುರೇಶ್ ಹಾಗೂ ತಹಸೀಲ್ದಾರ್ ಪುರಂದರ, ಇಒ ದೊಡ್ಡಸಿದ್ದಯ್ಯ, ಶಿರಾ ತಹಸೀಲ್ದಾರ್ ಜಗದೀಶ್ ಮತ್ತಿರರು ಹಾಜರಿದ್ದರು.