ಸಾರಾಂಶ
ವಿವಿಧ ನಿಗಮಗಳ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಕೊಳವೆ ಬಾವಿ ಕೊರೆಸಿಕೊಡುವ ಮೂಲಕ ಆ ಸಮುದಾಯಗಳನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಅರಸೀಕೆರೆ : ವಿವಿಧ ನಿಗಮಗಳ ಅಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಕೊಳವೆ ಬಾವಿ ಕೊರೆಸಿಕೊಡುವ ಮೂಲಕ ಆ ಸಮುದಾಯಗಳನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ 35 ಮಂದಿ ಫಲಾನುಭವಿಗಳಿಗೆ ಕೊಳವೆ ಬಾವಿ ಪಂಪ್‌ಸೆಟ್ ಮತ್ತು ಇತರೆ ಉಪಕರಣ ವಿತರಿಸಿ ಅವರು ಮಾತನಾಡಿದರು. ನಾನು ಶಾಸಕನಾದ ಮೇಲೆ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆವೊಂದರಲ್ಲೇ1 ಸಾವಿರಕ್ಕೂ ಅಧಿಕ ಕೊಳವೆ ಬಾವಿ ಕೊರೆಸಿದ್ದೇನೆ. ಅಧಿಕೃತವಾಗಿ ಎಷ್ಟು ಎಂಬ ಅಂಕಿ ಸಂಖ್ಯೆಯನ್ನು ಶೀಘ್ರ ಬಿಡುಗಡೆ ಮಾಡುವೆ ಎಂದರು. ಈ ವರ್ಷ ಸುಮಾರು 150 -200 ಕೊಳವೆ ಬಾವಿ ಕೊರೆಸಿದ್ದು, ಈ ಸಮುದಾಯಗಳನ್ನು ಆರ್ಥಿಕವಾಗಿ ಮೇಲೆತ್ತುವ ಪ್ರಾಮಾಣಿಕ ಕೆಲಸ ಮಾಡಲಾಗುತ್ತಿದೆ. ಕೃಷಿ ಇತರೆ ಚಟುವಟಿಕೆಗಳಿಗೆ ನೀರು ಕೊಟ್ಟರೆ ದುಡಿಯುವ ಕೈಗಳಿಗೆ ಕೆಲಸ ಸಿಗಲಿದೆ. ಕುಟುಂಬಗಳು ಆರ್ಥಿಕವಾಗಿಯೂ ಸದೃಢವಾಗಲಿವೆ ಎಂದರು. ಪರಿಶಿಷ್ಟ ಸಮುದಾಯಗಳಿಗೆ ವಿವಿಧ ಸಮುದಾಯ ಕಲ್ಪಿಸಿಕೊಡಲು ಅಂಬೇಡ್ಕರ್ ನಿಗಮ, ಸೇವಾಲಾಲ್, ಛಲವಾದಿ ನಿಗಮಗಳಿವೆ. ಸಿಎಂ ಸಿದ್ದರಾಮಯ್ಯ ಅವರು ವಿವಿಧ ಸಮುದಾಯಗಳಿಗೆ ನಿಗಮ ಸ್ಥಾಪಿಸಿದ್ದಾರೆ. ಆ ಮೂಲಕ ಆರ್ಥಿಕ ನೆರವು ನೀಡಿ, ತಳ ಸಮುದಾಯಗಳು ಗೌರವಯುತವಾಗಿ ದುಡಿದು ತಿನ್ನುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಳವೆ ಬಾವಿ ಕೊರೆಸುವ ಮೂಲಕ ಈ ಸಮಾಜಗಳನ್ನು ಮೇಲೆತ್ತುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಒಂದು ಕೊಳವೆ ಬಾವಿಗೆ ಹಿಂದೆ 3 ಲಕ್ಷ ಸಹಾಯಧನ ನೀಡಲಾಗುತ್ತಿತ್ತು, ಈಗ ಅದನ್ನು ೫ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇಂದು ಅಂಬೇಡ್ಕರ್ ನಿಗಮದ 35 ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಗುತ್ತಿದೆ ಎಂದರು. ನಾನು ಶಾಸಕನಾದ ಮೇಲೆ ಈ ಜನಾಂಗಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದೆ. ಹಾಗೆಯೇ ನಿರುದ್ಯೋಗ ನಿವಾರಣೆಗೂ ಒತ್ತು ನೀಡಲಾಗುತ್ತಿದೆ.
ರೈತರ ಜಮೀನುಗಳಲ್ಲಿ ಚೆಕ್‌ಡ್ಯಾಂ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೂ ಒತ್ತು ನೀಡಲಾಗಿದೆ. ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೈತರು ವಿವಿಧ ಉತ್ಪನ್ನ ಬೆಳೆಯುವ ಮೂಲಕ ತಾವೂ ಬೆಳೆಯಬೇಕು, ಸಮಾಜಕ್ಕೂ ಕೊಡುಗೆ ಕೊಡಬೇಕು ಎಂದು ಸಲಹೆ ನೀಡಿದರು.