ಜನಗಣತಿ ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಮುಂಚೆಯೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಇತರೆ ಸಿಬ್ಬಂದಿಗೆ ಮಾರ್ಚ್ 6 ರಿಂದ ಮೂರು ದಿನಗಳ ಈ ತರಬೇತಿ ನೀಡಿದ್ದೇವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2027ರ ಭಾರತೀಯ ಜನಗಣತಿ ಎರಡು ಹಂತದಲ್ಲಿ ನಡೆಯಲಿದ್ದು, ಹಂತ 1ರಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿ ನಡೆಯಲಿದ್ದು, 2026ರ ಏಪ್ರಿಲ್ 01 ರಿಂದ ಏಪ್ರಿಲ್ 15 ದಿನಗಳವರೆಗೆ ಸ್ವಯಂ ಗಣತಿ ಅವಧಿ ನಿಗದಿಪಡಿಸಲಾಗಿದೆ. ಮೊದಲ ಬಾರಿಗೆ ಸ್ವಯಂ ಗಣತಿಗೆ ಡಿಜಿಟಲ್ ವ್ಯವಸ್ಥೆ ತರಲಾಗಿದ್ದು, ಈ ವ್ಯವಸ್ಥೆ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಭಾರತ ಜನಗಣತಿ 2027ರ ನಿಮಿತ್ತ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಜನಗಣತಿ ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಮುಂಚೆಯೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಇತರೆ ಸಿಬ್ಬಂದಿಗೆ ಮಾರ್ಚ್ 6 ರಿಂದ ಮೂರು ದಿನಗಳ ಈ ತರಬೇತಿ ನೀಡಿದ್ದೇವೆ. ಹಾಗಾಗಿ ಈ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ. ಇದು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಏ.16ರಿಂದ ಮೇ 16ರವರೆಗೆ ಭಾರತದ ಜನಗಣತಿ-2027ರ ನಿಮಿತ್ತ ಮನೆಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ. ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗುತ್ತಿದ್ದು, 150 ರಿಂದ 200 ಮನೆಗಳು ಅಥವಾ 700 ರಿಂದ 800ಜನಸಂಖ್ಯೆಗೆ ಓರ್ವ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, 3121 ಜಿಲ್ಲಾ ಅಧಿಕಾರಿಗಳು, 2533 ಚಾರ್ಜ್ ಅಧಿಕಾರಿಗಳು, 422 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಹೇಳಿದರು.

ಎರಡನೇ ಹಂತವಾಗಿ ಫೆಬ್ರವರಿ 2027ರಲ್ಲಿ ಜನಸಂಖ್ಯಾ ಗಣತಿ ಕಾರ್ಯ ನಡೆಯಲಿದೆ. ಈ ಗಣತಿ ಕಾರ್ಯ ಡಿಜಿಟಲ್ ಆಗಿದ್ದು, ಮೊಬೈಲ್ ಆಪ್‌ನಲ್ಲಿ ನಿಗದಿಪಡಿಸಿದ ಪ್ರಶ್ನಾವಳಿ ಮೂಲಕ ದತ್ತಾಂಶ ಸಂಗ್ರಹಿಸುವುದು, ಈ ಜನಗಣತಿ ವಿಶೇಷವಾಗಿದೆ. ಡಿಜಿಟಲ್ ಮೋಡ್ ನಡೆಯುವ ಪ್ರಥಮ ಜನಗಣತಿಯಾಗಿದೆ. ಮೋಡ್ ನಡೆಯುವ ಪ್ರಥಮ ಜನಗಣತಿಯಾಗಿದೆ. ಗಣತಿದಾರರ ಸ್ಮಾರ್ಟ್‌ ಫೋನ್ ಮೀಸಲಾದ ಮೊಬೈಲ್‌ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಸ್ವಯಂ ಗಣತಿಯಲ್ಲಿ ಸಾರ್ವಜನಿಕರು ನೇರವಾಗಿ ಜನಗಣತಿ ನಿರ್ದೇಶನಾಲಯದ ಪೋರ್ಟಲ್‌ನಲ್ಲಿ ಕುಟುಂಬದ ಮಾಹಿತಿಯನ್ನು ದೋಷರಹಿತವಾಗಿ ನಮೂದಿಸಬಹುದಾಗಿರುತ್ತದೆ. ಎನುಮೆರೇಷನ್ ಪೋರ್ಟಲ್ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಉಲ್ಲೇಖ ಐಡಿ ಸೃಜನೆಯಾಗಲಿದ್ದು, ಸದರಿ ಉಲ್ಲೇಖ ಐಡಿ ಯನ್ನು ಗಣತಿದಾರರು ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗೆ ಏಪ್ರಿಲ್ 16 ರಿಂದ ಮೇ 15ರವರೆಗೆ ಭೇಟಿ ನೀಡಲಿದ್ದು, ಸದರಿ ಗಣತಿದಾರು ಭೇಟಿ ನೀಡಿದ ಸಂದರ್ಭದಲ್ಲಿ ಉಲ್ಲೇಖ ಐಡಿಯನ್ನು ಮುಂದಿನ ಪ್ರಕ್ರಿಯೆಗೆ ಗಣತಿದಾರಿಗೆ ನೀಡುವುದು.

ಭಾರತ ಜನಗಣತಿ ಮೊದಲನೇ ಹಂತವು ಪ್ರತಿಯೊಂದು ಕುಟುಂಬ, ರಚನೆ ಮತ್ತು ಮ್ಯಾಪ್ ಅನ್ನು ಒಳಗೊಂಡಿರುತ್ತದೆ. ಕರ್ನಾಟಕ ಸರ್ಕಾರದ ಅಧಿಸೂಚನೆ ಆರ್‌ಡಿ.119.ಟಿಎನ್‌ಆರ್.2026, ದಿನಾಂಕ 06/03/2026 ರ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ವಸತಿ ಗುಣಮಟ್ಟ, ಸೌಕರ್ಯಗಳು (ನೀರು, ವಿದ್ಯುತ್ ಮತ್ತು ಶೌಚಾಲಯಗಳು ಮುಂತಾದವು) ಮತ್ತು ಸ್ವತ್ತುಗಳ ಕುರಿತು ಈ ಕೆಳಕಂಡ 33 ಪ್ರಶ್ನೆಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದು ಫೆಬ್ರವರಿ-2027 ರಿಂದ ನಡೆಯುವ ಎರಡನೇ ಹಂತದ ಜನಸಂಖ್ಯಾ ಗಣತಿಗೆ ಅಡಿಪಾಯವನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು.

ಅತ್ಯಂತ ಮಹತ್ವದ ಈ ಕಾರ್ಯದಲ್ಲಿ ತೊಡಗಿರುವ ತರಬೇತಿದಾರರು ಅತ್ಯಂತ ಶಿಸ್ತುಬದ್ಧತೆಯಿಂದ, ನೀಡಿರುವ ನಿರ್ದೇಶನಗಳನ್ನು ಪಾಲಿಸಿಕೊಂಡು ಸಂಶಯ ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಗೊಂದಲ ಪರಿಹರಿಸಿಕೊಂಡು ಕಾರ್ಯ ನಿರ್ವಹಿಸಿ,ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ನಗರ ಸಭೆಯ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ, ಜಿಪಂ ಮುಖ್ಯ ಯೋಜನಾಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ಧೇಶಕ ಜುಂಜಣ್ಣ, ವಾರ್ತಾಸಹಾಯಕ ಮಂಜುನಾಥ್, ಸಿಬ್ಬಂದಿ ಇದ್ದರು.

ಸಿಕೆಬಿ-1 ಭಾರತ ಜನಗಣತಿ 2027ರ ನಿಮಿತ್ತ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು.