ರಾಮನಗರ: ಎಲ್ಲಾ ಕಲಾ ಪ್ರಕಾರಗಳಿಗೆ ರಂಗಭೂಮಿ ಅಡಿಪಾಯವಿದ್ದಂತೆ. ನಟ ಸಾರ್ವಭೌಮ ಡಾ. ರಾಜಕುಮಾರ್ ಸೇರಿದಂತೆ ದೇಶದ ಮೇರು ನಟರು ರಂಗಭೂಮಿ ಹಿನ್ನೆಲೆಯಿಂದ ಬಂದವರು ಎಂದು ಆರ್.ಚಂದ್ರಯ್ಯ ಅಭಿಪ್ರಾಯಪಟ್ಟರು
ರಾಮನಗರ: ಎಲ್ಲಾ ಕಲಾ ಪ್ರಕಾರಗಳಿಗೆ ರಂಗಭೂಮಿ ಅಡಿಪಾಯವಿದ್ದಂತೆ. ನಟ ಸಾರ್ವಭೌಮ ಡಾ. ರಾಜಕುಮಾರ್ ಸೇರಿದಂತೆ ದೇಶದ ಮೇರು ನಟರು ರಂಗಭೂಮಿ ಹಿನ್ನೆಲೆಯಿಂದ ಬಂದವರು ಎಂದು ಆರ್.ಚಂದ್ರಯ್ಯ ಅಭಿಪ್ರಾಯಪಟ್ಟರು.
ನಗರದ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಜನಮುಖಿ ಟ್ರಸ್ಟ್ ಹಾಗೂ ನಮ್ಮವರು ಬಳಗದ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಂಗ ಗಾಯನ, ರಂಗ ಗೌರವ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈಗಿನ ಆಧುನಿಕ ಮನರಂಜನಾ ಮಾಧ್ಯಮಗಳಿಗೂ ಮುಂಚೆ ಜನರ ಮನರಂಜನೆಗಾಗಿ ಇದ್ದದ್ದು ರಂಗಭೂಮಿ ಮಾತ್ರ. ಈಗ ಸಿನಿಮಾ, ಕಿರುತೆರೆ ಸೇರಿದಂತೆ ಹಲವು ರೀತಿಯ ಮಾಧ್ಯಮಗಳು ಇದ್ದರೂ, ರಂಗಭೂಮಿ ತನ್ನದೇ ಆದ ಮಹತ್ವ ಉಳಿಸಿಕೊಂಡು ಬಂದಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯು ರಂಗಭೂಮಿ ಚಟುವಟಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಕಲಾವಿದರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಇಂದಿಗೂ ಈ ಭಾಗದ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳನ್ನು ಸ್ಥಳೀಯರೇ ಆಯೋಜಿಸಿ ನಟಿಸುವುದು ಗಮನಾರ್ಹ ಎಂದು ಚಂದ್ರಯ್ಯ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಆ ನಿಟ್ಟಿನಲ್ಲಿ ಶಾಲಾ- ಕಾಲೇಜು ಹಂತದಲ್ಲೇ ಮಕ್ಕಳಿಗೆ ರಂಗಭೂಮಿ ಚಟುವಟಿಕೆಗಳನ್ನು ನೀಡುವ ಕೆಲಸವಾಗಬೇಕು. ಇದರಿಂದ ನಮ್ಮ ನೆಲದ ಜಾನಪದ ಕಲೆಗಳನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಯ ಎ.ಜೆ. ಸುರೇಶ್ ಮಾತನಾಡಿ, ರಂಗಭೂಮಿ ಎಲ್ಲಾ ಮನರಂಜನಾ ಕಲೆಗಳ ತಾಯಿಯಾಗಿದೆ. ನಾಟಕಗಳು ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತವೆ. ಪೌರಾಣಿಕ, ಸಾಮಾಜಿಕ ಸೇರಿದಂತೆ ವಿವಿಧ ರೀತಿಯ ನಾಟಕಗಳು ಜನರನ್ನು ಹಿಡಿದಿಟ್ಟುಕೊಂಡು, ಅವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ಹೇಳಿದರು.ರಂಗ ಗೌರವ ಸ್ವೀಕರಿಸಿದ ಹಿರಿಯ ಕಲಾವಿದ ವಿಜಯ ಕುಮಾರ್ , ರಾಮನಗರವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಇಲ್ಲಿ ಕಲಾ ಪ್ರದರ್ಶನ ಚಟುವಟಿಕೆಗಳಿಗೆ ಒಂದು ಕಲಾ ಭವನ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ, ಭವನ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ವೈ.ಎಸ್. ಸಿದ್ದರಾಮೇಗೌಡ, ಪುಟ್ಟರಾಜು, ರಕ್ಷಾ ಸಿಂಗ್, ವಿಜಯಕುಮಾರ್ ಹಾಗೂ ಲಕ್ಷ್ಮಿ ಕುಮಾರ್ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ಗೌರವಕ್ಕೆ ಪಾತ್ರರಾದ ಕಲಾವಿದರೂ ಸೇರಿದಂತೆ ಮಹಿಳಾ ಕಲಾವಿದರಾದ ಸುಶೀಲಾ, ಉಮಾ ಜಯದೇವ್ ಅವರು ಪೌರಾಣಿಕ ನಾಟಕದ ಸಂಭಾಷಣೆಗಳನ್ನು ಹೇಳುವ ಮೂಲಕ ಗಮನ ಸೆಳೆದರು.ಯೂನಿವರ್ಸಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೇತನ್ ಕುಮಾರ್, ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ನಮ್ಮವರು ಬಳಗದ ಡಾ. ಅಂಕನಹಳ್ಳಿ ಪಾರ್ಥ, ಪದ್ಮರೇಖಾ, ಡಾ. ಎಚ್.ಡಿ. ಉಮಾಶಂಕರ್ ಉಪಸ್ಥಿತರಿದ್ದರು.
------------------------27ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಂಗ ಗಾಯನ, ರಂಗ ಗೌರವ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಕಲಾವಿದರಿಗೆ ರಂಗ ಗೌರವ ಸಲ್ಲಿಸಲಾಯಿತು.----------------------------