ಕನ್ನಡಪ್ರಭ ವಾರ್ತೆ ಮೈಸೂರುವಚನ ಸಾಹಿತ್ಯ ಸಂರಕ್ಷಿಸಿದ ಡಾ. ಫ.ಗು. ಹಳಕಟ್ಟಿ ಅವರು ಕನ್ನಡದ ಮಹಾನ್ ಸಾಂಸ್ಕೃತಿಕ ಸೇತುವೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಾ.ಫ.ಗು.ಹಳಕಟ್ಟಿ ಅವರ ಜಯಂತ್ಯುತ್ಸವ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಿರಾರು ವಚನಗಳನ್ನು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಸಂಗ್ರಹಿಸಿ, ಅವುಗಳನ್ನು ಕನ್ನಡದ ಅಮೂಲ್ಯ ಪರಂಪರೆಯಾಗಿ ಉಳಿಸಿದ ಡಾ. ಫ. ಗು. ಹಳಕಟ್ಟಿಯವರ ಸಾಧನೆ ಕನ್ನಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅವರು ಕೇವಲ ಸಂಶೋಧಕರಾಗಿರಲಿಲ್ಲ ಕನ್ನಡದ ಆತ್ಮವನ್ನು ಮುಂದಿನ ತಲೆಮಾರಿಗೆ ತಲುಪಿಸಿದ ಮಹಾನ್ ಸಾಂಸ್ಕೃತಿಕ ಸೇತುವೆಯಾಗಿದ್ದರು ಎಂದು ಅವರು ಸ್ಮರಿಸಿದರು.

ಗಾವಡಗೆರೆ ಶ್ರೀ ಗುರುಲಿಂಗಜಂಗಮ ದೇವರ ಮಠದ .ಶ್ರೀ. ನಟರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ ಹರಿದ ಬಟ್ಟೆಯಲ್ಲೇ ತಮ್ಮ ಬಡತನವನ್ನು ಮುಚ್ಚಿಕೊಳ್ಳುತ್ತಿದ್ದ ಹಳಕಟ್ಟಿಯವರು, ಇಂದು ಹರಿದು ಹಂಚಿಹೋಗಿರುವ ಮನಸ್ಸುಗಳನ್ನು ಒಂದುಗೂಡಿಸುವ ಶ್ರೇಷ್ಠ ಸಿದ್ಧಾಂತವನ್ನು ನಮಗೆ ಕೊಟ್ಟು ಹೋಗಿದ್ದಾರೆ ಎಂದರು.

ಕವಿ ಕೆ.ಸಿ ಶಿವಪ್ಪ ಮಾತನಾಡಿ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, 12ನೇ ಶತಮಾನದ ಶರಣರ ಚಿಂತನೆಗಳನ್ನು ನಮಗೆ ಮರಳಿ ತಂದುಕೊಟ್ಟ ಮಹಾಪುರುಷ ಡಾ. ಫ. ಗು. ಹಳಕಟ್ಟಿ ಇವರನ್ನು ಇಡೀ ನಾಡು ಅತ್ಯಂತ ಪ್ರೀತಿ ಮತ್ತು ಗೌರವದಿಂದ "ವಚನ ಪಿತಾಮಹ " ಎಂದು ಕರೆಯುತ್ತದೆ ಎಂದರು.

175ಕ್ಕೂ ಹೆಚ್ಚು ಕೃತಿ ಸಂಪಾದಿಸಿದ ಹಳಕಟ್ಟಿಯವರು ''''ಶಿವಾನುಭವ'''' ಎಂಬ ಪತ್ರಿಕೆಯ ಮೂಲಕ ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸಿದರು. ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಜಾಗತಿಕ ಮಟ್ಟದಲ್ಲೂ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕವಿ ಕೆ.ಸಿ ಶಿವಪ್ಪ ಅವರು ಡಾ. ಮಹೇಂದ್ರ ಮೂರ್ತಿ ದೇವನೂರು ಅವರು ರಚಿಸಿರುವ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಪುಸ್ತಕವನ್ನು ಬಿಡುಗಡೆ ಮಾಡಿದರು.


ಶರಣ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನ ಸಲ್ಲಿಸಿದ ಮ.ಗು.ಸದಾನಂದಯ್ಯ, ಡಾ.ಹೆಳವರಹುಂಡಿ ಸಿದ್ದಪ್ಪ, ಪ್ರೊ.ಚಂದ್ರಶೇಖರಯ್ಯ, ಡಾ.ಲತಾ ರಾಜಶೇಖರ್, ಪ್ರೊ.ಎಸ್.ಶಿವರಾಜಪ್ಪ, ಶಕುಂತಲ ಜಯದೇವು, ಎಲ್.ಶಿವಲಿಂಗಪ್ಪ, ಶಾರದಾ ಶಿವಲಿಂಗಸ್ವಾಮಿ, ಶರಣೆ ಎಂ.ಎ.ನೀಲಾಂಬಿಕೆ, ಡಿ.ಎನ್.ಲೋಕಪ್ಪ, ವಚನ ಕುಮಾರಸ್ವಾಮಿ,ಚೌಹಳ್ಳಿ ಅಂಗರಾಜಪ್ಪ ಕಲ್ಮಳ್ಳಿ ನಟರಾಜು ಹಾಗೂ ಕುಮಾರಿ ವಚನ ಚೂಡಾಮಣಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಆಯುಕ್ತ ಡಾ. ಪಿ. ಶಿವರಾಜ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಎಸ್.ವಿ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ನಿರ್ಮಲ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎo.ಡಿ ಸುದರ್ಶನ್, ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರಾದ ಡಾ. ಕೆ.ಬಿ ಲಿಂಗರಾಜು, ಬಸವ ಜಯಂತಿ 2026 ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷರಾದ ಎಂ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಎ.ಪಿ ವಿರೂಪಾಕ್ಷ, ಕೋಶಾಧ್ಯಕ್ಷರಾದ ಭೀಮಾರಹಳ್ಳಿ ಜಯಶಂಕರ್, ಪ್ರಧಾನ ಸಂಚಾಲಕರಾದ ದೇವರಾಜು ಪಿ. ಚಿಕ್ಕ ಹಳ್ಳಿ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಎಸ್. ಪುಟ್ಟರಾಜಪ್ಪ ಹಾಗೂ ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ ಮಲ್ಲೇಶ್ ಉಪಸ್ಥಿತರಿದ್ದರು.