ಜಿಲ್ಲಾಧಿಕಾರಿ ಶನಿವಾರ ಜಿಲ್ಲೆಯ ಎಲ್ಲ ರಾಷ್ಟ್ರೀಯ ಪಕ್ಷದ ಪದಾಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಎಸ್‌ಐಆರ್ ಮ್ಯಾಪಿಂಗ್ ಕೈಗೊಳ್ಳುವುದಕ್ಕೆ ಪ್ರತಿ ಬೂತ್‌ಗೂ ರಾಜಕೀಯ ಪಕ್ಷಗಳಿಂದ ಏಜೆಂಟ್‌ಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿ ಭ್ವನರ್‌ಸಿಂಗ್ ಮೀನಾ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಶನಿವಾರ ಜಿಲ್ಲೆಯ ಎಲ್ಲ ರಾಷ್ಟ್ರೀಯ ಪಕ್ಷದ ಪದಾಧಿಕಾರಿಗಳ ಸಭೆ ಕರೆದು ಎಸ್‌ಐಆರ್ ಪ್ರಕ್ರಿಯೆ ನಡೆಸುವುದಕ್ಕೆ ಏಜೆಂಟ್‌ಗಳನ್ನು ಕೂಡಲೇ ನೇಮಿಸುವಂತೆ ಈ ಹಿಂದೆಯೇ ತಿಳಿಸಲಾಗಿದೆ. ಅದಷ್ಟು ಬೇಗನೇ ನೇಮಿಸಿ ಎಂದು ತಿಳಿಸಿದ್ದಾರೆ.ಕಳೆದ ಶುಕ್ರವಾರ ‘ಕನ್ನಡಪ್ರಭ’ ಎಸ್‌ಐಆರ್ ಮ್ಯಾಪಿಂಗ್‌ಗೆ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟ್ ನೇಮಿಸಿಲ್ಲ ಎಂಬುದರ ಕುರಿತು ವಿಶೇಷ ವರದಿ ಪ್ರಕಟಿಸಿತ್ತು.
ಈಗಾಗಲೇ ಶೇ.90.73 ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕತೆಯಿಂದ ಕೂಡಿದ್ದು, ಇದರ ಉದ್ದೇಶ ಅರ್ಹ ಮತದಾರರನ್ನು ಮತಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ನಿಯಮಾನುಸಾರ ಕೈಬಿಡುವುದಾಗಿದೆ. ಯಾವುದೇ ತರಹದ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.
ಎಸ್‌ಐಆರ್ ಕಾರ್ಯ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿದೆ. 2002 ರಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿದ್ದು, ಈ ಮತದಾರರ ಪಟ್ಟಿ ಆಧರಿಸಿ ಫ್ಯಾಮಿಲಿ ಲಿಂಕ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.ಕುಟುಂಬದ ಮುಖ್ಯಸ್ಥರ ಹೆಸರು 2002ರ ಪಟ್ಟಿಯಲ್ಲಿದ್ದರೆ,ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ಇಲ್ಲಿ ನೆಲೆಸಿರುವವರ ಹೆಸರು ಹಳೆಯ ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಅವರಿಗೆ ಫ್ಯಾಮಿಲಿ ಲಿಂಕ್ ಸಿಗುವುದಿಲ್ಲ. ಈ ಹಿಂದೆ ಅವರು ವಾಸ ವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಆ ಮಾಹಿತಿ ಲಭ್ಯವಿದ್ದಲ್ಲಿ ಹೆಸರು ಸೇರ್ಪಡೆ ಮಾಡಬಹುದು. ಮ್ಯಾಪಿಂಗ್ ಆಗದೇ ಇರುವವರು ಚುನಾವಣಾ ಆಯೋಗ ನಿಗದಿಪಡಿಸಿದ ಯಾವುದಾದರೊಂದು ದಾಖಲೆ ನೀಡಿದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು. ಹೊರಗಿನಿಂದ ಬಂದು ವಾಸಿಸುತ್ತಿರುವ ಉದ್ಯೋಗಿಗಳು, ವಲಸಿಗರು ಹಾಗೂ ಮದುವೆಯಾಗಿ ಬಂದಿರುವ ಹೊಸ ಮತದಾ ರರನ್ನು ಗುರುತಿಸಿ ಭಾರತದ ನಾಗರಿಕರೆಂದು ದೃಢೀಕರಿಸುವ ಅಧಿಕೃತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪಡೆದು ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮಾತನಾಡಿ, ಜಿಲ್ಲೆಯಲ್ಲಿ 1230 ಮತಗಟ್ಟೆಗಳಿದ್ದು, ಎಲ್ಲ ಬೂತ್‌ಗಳಿಗೂ ಬಿಎಲ್‌ಒಗಳನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಇದೀಗ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈ ಬಾರಿ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. 2025ರ ಜನವರಿಯಲ್ಲಿ ಅಂತಿಮಗೊಂಡಿದ್ದ ಮತದಾರರ ಪಟ್ಟಿಯನ್ನೇ ಮೂಲ ಆಧಾರವಾಗಿಟ್ಟುಕೊಂಡು 2002ರ ಕೊನೆಯ ಎಸ್‌ಐಆರ್ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದರು.ಎಸ್‌ಐಆರ್ ಪ್ರಕ್ರಿಯೆ ಅಂಗವಾಗಿ ತರಬೇತಿ ಹಾಗೂ ಜೂನ್ 30 ರಿಂದ ಜುಲೈ 29ರವರೆಗೆ ಒಂದು ತಿಂಗಳ ಕಾಲ ಜಿಲ್ಲಾದ್ಯಂತ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುವರು. ಈ ವೇಳೆ ಪ್ರತೀ ಮತದಾರರಿಗೂ ಮುದ್ರಿತ ಎನ್ಯೂಮರೇಶನ್ ಫಾರಂ ನೀಡುವರು. ಇದು ದ್ವಿಪ್ರತಿಯಲ್ಲಿದ್ದು, ಒಂದು ಪ್ರತಿಯನ್ನು ಮತದಾರರಿಗೆ ನೀಡಿ, ಮತ್ತೊಂದು ಪ್ರತಿಯಲ್ಲಿ ಮತದಾರರ ಸಹಿ ಪಡೆದು ಬಿಎಲ್‌ಒಗಳು ತಮ್ಮಲ್ಲೇ ಇರಿಸಿಕೊಳ್ಳಲಿದ್ದಾರೆ. ತದನಂತರ ಈ ಸಹಿ ಮಾಡಿದ ಫಾರಂ ಅನ್ನು ಸ್ಕ್ಯಾನ್ ಮಾಡಿ ಚುನಾವಣಾ ಆಯೋಗದ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದರು.ಚುನಾವಣಾ ಆಯೋಗದ ನಿಯಮದಂತೆ ಜುಲೈ 29ರ ಒಳಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕ್ರಮಬದ್ಧವಾಗಿ ಪೂರ್ಣಗೊಳ್ಳಲಿದೆ. ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಸಾರ್ವಜನಿಕರು ಅಕ್ಟೋಬರ್ 3 ರ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳ ಇತ್ಯರ್ಥದ ನಂತರ ಅಕ್ಟೋಬರ್ 7 ರಂದು ಅಂತಿಮವಾಗಿ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.