ಸಾರಾಂಶ
ಎಸ್.ಎಂ. ಸೈಯದ್ ಗಜೇಂದ್ರಗಡ
ಆಗಸ್ಟ್‌ನಲ್ಲಿ ನಡೆಯಬೇಕಿದ್ದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್‌ಗೆ ಮುಂದೂಡಲಾಗಿದೆ. ಈ ಕುರಿತು ಕಸಾಪ ಪದಾಧಿಕಾರಿಗಳು ಹೇಳಿದ್ದಾರೆ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮತ್ತೊಮ್ಮೆ ಗ್ರಹಣ ಹಿಡಿದಂತಾಗಿದೆ. ಈ ನಿರ್ಧಾರ ಸಾಹಿತ್ಯಾಸಕ್ತರಲ್ಲಿ ಬೇಸರ ಮೂಡಿಸಿದೆ. ಅಷ್ಟೇ ಅಲ್ಲ ಈ ವರ್ಷ ಜಿಲ್ಲಾ ಸಮ್ಮೇಳನ ನಡೆಯುತ್ತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನ ಸಾಕ್ಷಿಪ್ರಜ್ಞೆ. ಜಿಲ್ಲೆಯಲ್ಲಿ ಆಗು-ಹೋಗುಗಳ ಬಗ್ಗೆ ಚರ್ಚೆಗಳೊಂದಿಗೆ ನಾಡು, ನುಡಿಗೆ ಸಂಬಂಧಿಸಿದ ಪುಸ್ತಕ, ನಾಡು, ನುಡಿ ಕಟ್ಟಲು ಶ್ರಮಿಸಿದ ಗಣ್ಯರನ್ನು ಗೌರವಿಸುವ ಹಾಗೂ ಸ್ಮರಿಸುವ ಐತಿಹಾಸಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಾ ಬಂದಿವೆ. ಆದರೆ ಇಂತಹ ಅರ್ಥಪೂರ್ಣ ಸಮ್ಮೇಳನ ಪಟ್ಟಣದಲ್ಲಿ ನಡೆಸಲು ಮುಹೂರ್ತ ಕೂಡಿಬರುತ್ತಲೇ ಇಲ್ಲ. ಒಂದಿಲ್ಲೊಂದು ಕಾರಣದಿಂದ ಕಸಾಪ ಸಮ್ಮೇಳನವನ್ನು ಮುಂದೂಡತ್ತ ಬಂದಿದೆ. ನಿಗದಿಯಂತೆ ಆ. 24, 25ರಂದು ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ ನವೆಂಬರ್ ತಿಂಗಳಿಗೆ ಮುಂದೂಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕಳೆದ ವರ್ಷವೇ ನಡೆಯಬೇಕಿದ್ದ ಸಮ್ಮೇಳನ: ಪಟ್ಟಣದಲ್ಲಿ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ೨೦೨೩ರ ಮಾ. ೧೧ ಹಾಗೂ ೧೨ರಂದು ನಡೆಸಲು ನಿರ್ಧರಿಸಲಾಗಿತ್ತು. ಶಾಸಕ ಕಳಕಪ್ಪ ಬಂಡಿ ಲಾಂಛನ ಬಿಡುಗಡೆ ಮಾಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸಮ್ಮೇಳನ ಮುಂದೂಡಲಾಗಿದೆ ಎಂದು ಕಸಾಪ ಜಿಲ್ಲಾ ಘಟಕ ಪ್ರಕಟಣೆ ನೀಡಿತ್ತು. ಆದಾದ ವರ್ಷದ ಬಳಿಕ ಫೆಬ್ರುವರಿ ತಿಂಗಳಲ್ಲಿ ನಿಗದಿಯಾಗಿದ್ದ ಸಮ್ಮೇಳನ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಮತ್ತೆ ಜಿಲ್ಲಾ ಸಮ್ಮೇಳನ ಆ. ೨೪ ಹಾಗೂ ೨೫ರಂದು ನಡೆಸಲು ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಪೂರ್ವಭಾವಿ ಸಭೆ ಸಹ ನಡೆಸಲಾಗಿತ್ತು. ಆದರೆ ಆ. ೩ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರ ಸಭೆಯಲ್ಲಿ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನ. ೮, ೯ ಹಾಗೂ ೧೦ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಹೇಳಿದ್ದಾರೆ.
ಜಿಲ್ಲೆ ರಚೆನೆಯಾಗಿ ೨೫ ವರ್ಷವಾಗಿದ್ದರೂ ಈಗ ನಡೆಯಬೇಕಿರುವುದು ೧೦ನೇ ಜಿಲ್ಲಾ ಸಮ್ಮೇಳನ. ಅದು ಸಹ ಮುಂದೂಡಲಾಗಿದೆ. ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವು ಅದ್ಧೂರಿಯಾಗಿ ನಡೆಯಬೇಕು ಎನ್ನುವ ಆಶಯ ಎಲ್ಲರದ್ದು. ಆದರೆ ಅದೇ ವೇಳೆಗೆ ಜಿಲ್ಲಾ ಸಮ್ಮೇಳನ ಮುಂದೂಡಿರುವ ಕುರಿತು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಪಟ್ಟಣದಲ್ಲಿ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲು ಕಸಾಪ ತಾಲೂಕು ಘಟಕದ ನಿರ್ಲಕ್ಷ್ಯತನವೇ ಮುಖ್ಯ ಕಾರಣ. ಸಾಹಿತ್ಯಿಕ ಚಟುವಟಿಕೆ ಸಂಪೂರ್ಣ ನಿಂತಿದೆ. ಕಸಾಪ ೧೦ನೇ ಜಿಲ್ಲಾ ಸಮ್ಮೇಳನ ನಡೆಸಿದ್ದರೆ ಇದೇ ವರ್ಷ ೧೧ನೇ ಸಮ್ಮೇಳನ ನಡೆಸಲು ಸಹ ಸಾಕಷ್ಟು ಸಮಯಾವಕಾಶ ಸಿಗುತ್ತಿತ್ತು ಎಂದು ಶಿಕ್ಷಕ ಆರ್.ಕೆ. ಬಾಗವಾನ ತಿಳಿಸಿದ್ದಾರೆ.
ಪಟ್ಟಣದಲ್ಲಿ ೧೦ನೇ ಜಿಲ್ಲಾ ಸಮ್ಮೇಳನ ಮುಂದಕ್ಕೆ ಹೋಗಿರುವುದು ಬೇಸರ ತರಿಸಿದೆ. ಆದರೆ ನ. ೮, ೯ ಹಾಗೂ ೧೦ರಂದು ೧೦ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಹಾಗೂ ೧೦ನೇ ಜಿಲ್ಲಾ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ಶ್ರಮಿಸಲಾಗುವುದು ಎಂದು ಕಸಾಪ ತಾಲೂಕಾಧ್ಯಕ್ಷ ಎ.ಪಿ. ಗಾಣಗೇರ ಹೇಳಿದ್ದಾರೆ.