ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರಾಭಿವೃದ್ಧಿ ಪ್ರಾಧಿಕಾರದಿಂದ ಇಷ್ಟ ಬಂದ ಹಾಗೇ ಅನುಮತಿ ಕೊಟ್ಟರೆ ಮುಂದೆ ನಡೆಯುವ ಅನಾಹುತಗಳಿಗೆ ಯಾರು ಹೊಣೆ. ಯಾವುದೇ ಅನುಮತಿ ಕೊಡಬೇಕಾದರೂ ಮೊದಲು ಸ್ಥಳ ಪರಿಶೀಲನೆ ಮಾಡಬೇಕು. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಹೊರವಲಯದ ಕೆಯುಡಿಎ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಪ್ರಾಧಿಕಾರಕ್ಕೆ ಹೆಸರಿಗಷ್ಟೇ ಹೋಟೆಲ್, ಮನೆ, ಮಳಿಗೆ ಅಂತ ಅರ್ಜಿ ಹಾಕಿಕೊಳ್ಳತ್ತಾರೆ, ಅನುಮತಿ ಬಂದ ಮೇಲೆ ಮುಂದಿನ ದಿನಗಳಲ್ಲಿ ಬೇರೆ ಕೆಲಸಕ್ಕೆ ಬಳಸಿಕೊಳ್ಳತ್ತಾರೆ. ಏನಾದರೂ ಸಮಸ್ಯೆ ಬಂದರೆ ಪ್ರಾಧಿಕಾರದ ಮೇಲೆ ಆರೋಪ ಮಾಡುತ್ತಾರೆ. ಇನ್ನು ಮುಂದೆ ಅಂತಹ ತಪ್ಪು ನಡೆಯಬಾರದು ಎಂದರು.ರಿಂಗ್‌ರೋಡ್ ನಿರ್ಮಾಣಕ್ಕೆ ಹಣ
ನಗರದಿಂದ ಸುಮಾರು ಒಂಭತ್ತು ಕಿಮೀ ಅಂತರದಲ್ಲಿ ರಿಂಗ್ ರೋಡ್ ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ, ಈಗಾಗಲೇ ಇದಕ್ಕೆ ಅನುದಾನ ಸಹ ಬಿಡುಗಡೆಯಾಗಿದೆ ಅದರ ಒಳಗಡೆಯಲ್ಲಿ ಕೆಯುಡಿಎನಿಂದ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಿಸಲು ಭೂಮಿ ಪಡೆಯಬೇಕು. ಇದಕ್ಕೆ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ, ಖಾಲಿ ಉಳಿದಿರುವ ೩೩೨ ನಿವೇಶನಗಳನ್ನು ಸರ್ಕಾರದ ನಿಯಮಾನುಸಾರವಾಗಿ ಮಾರಾಟ ಮಾಡುವಂತೆ ಸೂಚನೆ ನೀಡಿದರು. ಖಾಸಗಿಯಾಗಿ ಲೇಔಟ್ ನಿರ್ಮಾಣ ಮಾಡೋರಿಗೆ ಕನಿಷ್ಠ ನೀರು, ಚರಂಡಿ, ರಸ್ತೆ, ವಿದ್ಯುತ್ ಇದ್ದೀಯಾ ಇಲ್ಲವಾ ಅಂತ ಪರಿಶೀಲನೆ ನಡೆಸಬೇಕು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಇದ್ದರೆ ಅಷ್ಟೇ ಪ್ರಾಧಿಕಾರದಿಂದ ಅನುಮತಿ ಕೊಡಿ ಇಲ್ಲದೆ ಹೋದರೆ ಸಭೆಯ ಆಜೆಂಡಾಗೆ ತರಬೇಡಿ ಎಂದರು.ಬಡಾವಣೆ ಅಭಿವೃದ್ಧಿಯಾಗಿಲ್ಲಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯಲ್ಲಿ ನ್ಯಾಯಾಧೀಶರು ವಾಸ ಮಾಡುತ್ತಿದ್ದಾರೆ. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಇಲ್ಲ ಎಂದರೆ ಮುಂದೆ ನಮ್ಮ ಬಗ್ಗೆ ತಪ್ಪು ತಿಳಿವಳಿಕೆ ಹೋಗುತ್ತದೆ, ಸುಮಾರು ೩೦ ವರ್ಷವಾಗಿದೆ. ಬಡಾವಣೆ ಪ್ರಾರಂಭವಾಗಿ ಅಭಿವೃದ್ಧಿಯಾಗಿಲ್ಲ ಎಂದರೆ ಹೇಗೆ. ಮಳೆಗಾಲ ಪ್ರಾರಂಭವಾಗಿದೆ ಚರಂಡಿಗಳು ಸೇರಿದಂತೆ ಇನ್ನೂ ವಿವಿಧ ಅಭಿವೃದ್ಧಿ ಕೆಲಸವನ್ನು ಮಾಡಲಿಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಎಂದು ಸೂಚಿಸಿದರು.ಕೆಯುಡಿಎ ಗಣಕೀರಣ ಮಾಡಿ
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಕೆಯುಡಿಎ ಕಛೇರಿ ಪ್ರಾರಂಭವಾಗಿ ಇಷ್ಟು ವರ್ಷಗಳ ಕಳೆದರೂ ಕಡತಗಳನ್ನು ಗಣಕೀಕೃತ ಮಾಡಿಲ್ಲ ಎಂದರೆ ಹೇಗೆ. ಕೂಡಲೇ ಸಂಬಂಧಿಸಿದ ಇಲಾಖೆಯ ಮಾರ್ಗದರ್ಶನದಲ್ಲಿ ಕೂಡಲೇ ಮಾಡಬೇಕು, ಪ್ರಾಧಿಕಾರಕ್ಕೆ ಅನುಮತಿಗಾಗಿ ಬರುವ ಪ್ರತಿಯೊಬ್ಬರ ಅರ್ಜಿಯ ಜೊತೆಗೆ ನೇರವಾಗಿ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಇದ್ದರೆ ಇಂತಿಷ್ಟು ದಿನಗಳಲ್ಲಿ ಸರಿ ಪಡಿಸಬೇಕು ಅಂತ ಅವರ ಕಡೆಯಿಂದ ಲಿಖಿತವಾಗಿ ಉತ್ತರ ಪಡೆದು ಅನುಮತಿ ಕೊಡಬೇಕು ಎಂದರು. ಸಭೆಯಲ್ಲಿ ಕೆಯುಡಿಎ ಅಧ್ಯಕ್ಷ ಮಹಮ್ಮದ್ ಹನೀಫ್, ಎಡಿಸಿ ಮಂಗಳಾ, ಕೆಯುಡಿಎ ಆಯುಕ್ತ ಶ್ರೀನಾಥ್, ಸಹಾಯಕ ನಿರ್ದೇಶಕಿ ಅನಿತಾ, ಡಿಹೆಚ್‌ಒ ಜಗದೀಶ್, ಪಿಡ್ಯೂಡಿ ಇಂಜಿನಿಯರ್ ರಾಮಮೂರ್ತಿ, ಇನ್ಸ್‌ಪೆಕ್ಟರ್ ಶಿವಕುಮಾರ್ ಇದ್ದರು.