ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಕೊರತೆ, ಮರಣೋತ್ತರ ಪರೀಕ್ಷೆಯ ಅಲಭ್ಯತೆ ಜೊತೆಗೆ ವಿದ್ಯುತ್‌ಚ್ಛಕ್ತಿ ಕೈಕೊಟ್ಟಾಗ ಪರ‍್ಯಾಯ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಬರಬೇಕಾದ ಸೌಲಭ್ಯಗಳು ಲಭ್ಯವಾಗದೆ ಜನರ ಕನಸು ನೂಚ್ಚುನೂರಾಗಿದೆ.ಜಿಲ್ಲೆಯಲ್ಲಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಸುಂಟಿಕೊಪ್ಪ ಒಂದಾಗಿದ್ದು ಹೋಬಳಿ ಕೇಂದ್ರವಾಗಿದೆ. ಸುಂಟಿಕೊಪ್ಪ ಪಟ್ಟಣದ ನಡುವೆಯೇ 275 ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಕನಿಷ್ಠ ಮೂಲಭೂತ ಸೌಲಭ್ಯಗಳು ಇಂದಿಗೂ ದೊರೆತಿಲ್ಲ.
ಸುಂಟಿಕೊಪ್ಪ, ಕೆದಕಲ್, ಕಂಬಿಬಾಣೆ, ಕೊಡಗರಹಳ್ಳಿ, 7ನೇ ಹೊಸಕೋಟೆ, ಹರದೂರು, ನಾಕೂರು ಶಿರಂಗಾಲ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮಕ್ಕೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಒಳಗೊಂಡಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ.ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನ ಸಂಖ್ಯೆಯ ಜೊತೆಗೆ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯು ಸುಂಟಿಕೊಪ್ಪ ಪಟ್ಟಣದಲ್ಲಿ ಹಾದು ಹೋಗಿದ್ದು, ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸಬೇಕೆಂಬ ಬಹುದಿನದ ಬೇಡಿಕೆಗೆ ಇನ್ನೂ ಸ್ಪಂದನೆ ದೊರಕಿಲ್ಲ. ಆದರೂ ಇರುವ ವ್ಯವಸ್ಥೆಯಲ್ಲಿ ಕನಿಷ್ಠ ಆಂಬುಲೆನ್ಸ್ ತುರ್ತು ಪ್ರಥಮ ಚಿಕಿತ್ಸೆ ಹಾಗೂ ಜೀವರಕ್ಷಕ ವ್ಯವಸ್ಥೆಗಳು ಇಲ್ಲಿ ಇಲ್ಲದಿರುವುದು ವಿಷಾದನೀಯ ಅಂಶ.ಮೂಲತಃ ಕೊಡಗಿನವರಾಗಿ ಹಾಲಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಈ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿಯ ಎಲ್ಲ ಕುಂದು ಕೊರತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು 2 ವರ್ಷಗಳೇ ಸಮೀಪಿಸುತ್ತಿದ್ದರೂ ಊರಿನವರ ಬಹುನಿರೀಕ್ಷೆಗೆ ಸ್ಪಂದನೆ ದೊರಕದಿರುವುದು ಜನರಿಗೆ ನಿರಾಸೆ ಮೂಡಿಸಿದೆ.
ತುರ್ತು 108 ಅಂಬ್ಯುಲೆನ್ಸ್ ಇಲ್ಲದೆ ಇರುವುದರಿಂದ ದೂರದ ಊರುಗಳಾದ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಅಂತಹ ಹತ್ತಾರು ಕಿ.ಮೀ ದೂರದಿಂದ ಆಗಮಿಸುವ ವಾಹನಕ್ಕಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ತುರ್ತು ವಾಹನಗಳು ಸಮಯಕ್ಕೆ ಸರಿಯಾಗಿ ದೊರೆಯದ ಹಿನ್ನಲೆಯಲ್ಲಿ ಅದೆಷ್ಟೋ ಜೀವಕ್ಕೆ ಕುತ್ತು ಬಂದಿದೆ. ಇಂತಹ ಸನ್ನಿವೇಶಗಳಿದ್ದು ಸಂಬಂಧಿಸಿದ ಮೇಲಾಧಿಕಾರಿಗಳು ಇಲ್ಲಿಗೆ ಈ 108 ವಾಹನವನ್ನು ಒದಗಿಸಲು ಮುಂದಾಗದಿರುವುದು ಅಧಿಕಾರಿಗಳ ಕರ್ತವ್ಯ ಲೋಪಗಳನ್ನು ಎತ್ತಿ ತೋರಿಸುತ್ತಿದೆ.ಕೆದಕಲ್, ಕಂಬಿಬಾಣೆ, ಕೊಡಗರಹಳ್ಳಿ, 7ನೇ ಹೊಸಕೋಟೆ, ಹರದೂರು, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ ಆರೋಗ್ಯ ಉಪಕೇಂದ್ರಗಳು ಮಾತ್ರ ಕಾರ್ಯಾಚರಿಸುತ್ತಿದೆ. ಆದರೆ ಈ ಎಲ್ಲ ಗ್ರಾಮದ ಜನತೆಯು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿತರಾಗಿದ್ದಾರೆ. ಈ ಗ್ರಾಮಗಳಲ್ಲಿ ನೆಲೆಸಿರುವ ಮಂದಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಾಗ ಅನಾರೋಗ್ಯ ಪೀಡಿತರನ್ನು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲು 108 ವಾಹನಗಳು ಇಲ್ಲದ ಕಾರಣ ಖಾಸಗಿ ವಾಹನಗಳ ಮೂಲಕ ಸಾಗಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಬಡ ರೋಗಿಗಳು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ಕನಿಷ್ಠ ವಿದ್ಯುತ್ ಸಂಪರ್ಕ ಕೈಕೊಟ್ಟಾಗ ಪರ‍್ಯಾಯ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ಪ್ರಾಥಮಿಕ ಕೊರತೆಯಾಗಿದ್ದು, ಈ ಬಗ್ಗೆ ತುರ್ತು ಗಮನಹರಿಸುವುದು ಅವಶ್ಯ.। ಕೆ.ಎ.ಲತೀಫ್, ಎಸ್‌ಡಿಟಿಯು ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ
ನಾಕೂರು ಶಿರಂಗಾಲ ಗ್ರಾಮದಲ್ಲಿ ಉಪ ಕೇಂದ್ರ ಮಾತ್ರವಿದ್ದು ಇಲ್ಲಿನ ಆರೋಗ್ಯದಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ದೂರದ 20 ಕಿ.ಮೀ. ದೂರದ ಸುಂಟಿಕೊಪ್ಪ ಆರೋಗ್ಯ ಕೇಂದ್ರವನ್ನೇ ಅವಲಂಬಿತರಾಗಿದ್ದಾರೆ. ಇಲ್ಲಿ ಓರ್ವ ವೈದ್ಯರು ತೀವ್ರ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7 ಕ್ಕೂ ಮಿಕ್ಕಿ ಗ್ರಾಮ ಪಂಚಾಯಿತಿಗಳು ಒಳಪಟ್ಟಿದ್ದು ಇಲ್ಲಿ ತುರ್ತು 108 ಸೇವಾ ವಾಹನ ಬೇಕಾಗಿದೆ.। ಮಂದೋಡಿ ಜಗನ್ನಾಥ್ , ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ
7 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು ಕೂಲಿ ನಾಲಿ ಮಾಡಿ ಜೀವಿಸುತ್ತಿರುವ ಈ ಮಂದಿಗೆ ಆಸ್ಪತ್ರೆಗೆ ತೆರಳಲು ವಾಹನ ಸೌಕರ್ಯ ದೊರೆಯುವುದು ಕಷ್ಟ ಸಾಧ್ಯ. ಅಲ್ಲದೇ ಕಾಡಾನೆ ಹಾಗೂ ವನ್ಯ ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ವನ್ಯ ಪ್ರಾಣಿಗಳಿಂದ ದಾಳಿಗೆ ತುತ್ತಾದಾಗ ಚಿಕಿತ್ಸೆಗಾಗಿ ಕರೆದೊಯ್ಯಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಈ ಸಂದರ್ಭಗಳಲ್ಲಿ ಜೀವಕ್ಕೆ ಕುತ್ತು ತಂದ ಘಟನೆಗಳು ಸಂಭವಿಸಿದೆ.। ಆರ್.ಆರ್. ಮೋಹನ್, ಕಂಬಿಬಾಣೆ ಗ್ರಾಮ ಪಂಚಾಯಿತಿ ಸದಸ್ಯ
ನಮ್ಮ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಮೀಸಲು ಅರಣ್ಯದ ಅಂಚಿನಲ್ಲಿದೆ. ಒಂದೆಡೆ ಕಾಡಾನೆ ಹಾಗೂ ವನ್ಯ ಪ್ರಾಣಿಗಳ ಹಾವಳಿ ಮತ್ತೊಂದೆಡೆ ಉತ್ತಮ ಪ್ರವಾಸಿ ತಾಣವು ಕೂಡ ಈ ಗ್ರಾಮಕ್ಕೆ ಹೊಂದಿಕೊಂಡಿದೆ. ಇಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಸುಂಟಿಕೊಪ್ಪ ವ್ಯಾಪ್ತಿಗೆ ಒಳಪಟ್ಟಿದ್ದು ಸುಂಟಿಕೊಪ್ಪಕ್ಕೆ ತೆರಳಲು ವಾಹನದ ಅನಾನುಕೂಲತೆ ಇರುತ್ತದೆ. 108 ತುರ್ತು ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಸಮಯವಕಾಶ ದೂರದ ಊರುಗಳ ಹೆಸರುಗಳನ್ನು ತಿಳಿಸಿ ಯಾವುದು ಹತ್ತಿರವೋ ಅಲ್ಲಿಂದ ಸೌಲಭ್ಯಕ್ಕೆ ಅನುವು ಮಾಡಿಕೊಡುತ್ತಾರೆ. 108 ಆರೋಗ್ಯ ಕವಚ ಬರುವವರೆಗೆ ರೋಗಿಯು ಜೀವ ಕೈಯಲ್ಲಿ ಹಿಡಿದು ನರಳುವ ಪರಿಸ್ಥಿತಿಯಾಗಿದೆ.। ಇ.ಬಿ.ಜೋಸೆಫ್ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ
ಕೆದಕಲ್ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿರುವ ಗ್ರಾಮವಾಗಿದ್ದು, ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಈ ಗ್ರಾಮದಲ್ಲಿ ಕಾಡಾನೆ ಹಾಗೂ ವನ್ಯಹಾವಳಿಯಿದ್ದು, ಕಿರಿದಾದ ರಸ್ತೆಯನ್ನು ಒಳಗೊಂಡ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಹಾಗೂ ವನ್ಯ ಪ್ರಾಣಿಗಳ ದಾಳಿಗೀಡಾದರೆ ಪ್ರಾಥಮಿಕ ಚಿಕಿತ್ಸೆಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಬೇಕಾಗಿದೆ. 108 ತುರ್ತು ವಾಹನ ಕಳೆದೊಂದು ವರ್ಷದಿಂದ ದುರಸ್ತಿಗೀಡಾಗಿರುವುದು, ಸಾರ್ವಜನಿಕರ ಸೌಲಭ್ಯಕ್ಕೆ ಲಭಿಸದೆ ಇರುವ ವಾಹನದ ಬಗ್ಗೆ ಮೇಲಾಧಿಕಾರಿಗಳು ಜಾಣಮೌನ ವಹಿಸಿರುವುದು ಹತ್ತು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.। ಸಂಜುಪೊನ್ನಪ್ಪ, ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವು ಮೂಲಭೂತ ಸೌಲಭ್ಯ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಲ್ಲಿಸುತ್ತಾ ಬರಲಾಗುತ್ತಿದ್ದರೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ದಿನದಿಂದ ದಿನಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದರಿಂದ ಮತ್ತೊಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದೆ. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದು ಸಂಬಂಧಿಸಿದ ಅಧಿಕಾರಿ ಇಲಾಖೆಗೆ ಪತ್ರಗಳನ್ನು ಕಳುಹಿಸಲಾಗುತ್ತಿದ್ದರೂ ಇಂದಿಗೂ ಸಮಸ್ಯೆ ಪರಿಹಾರಕ್ಕೆ ಮುಂದಾಗದಿರುವುದು ಗ್ರಾಮಸ್ಥರಿಂದ ಜನಪ್ರತಿನಿಧಿಗಳಾದ ನಮಗೆ ಛೀಮಾರಿ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಿಸಿದ ಶಾಸಕರು, ಜಿಲ್ಲಾ ಕುಟುಂಬ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.। ಪಿ.ಆರ್.ಸುನಿಲ್ ಕುಮಾರ್ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ
;Resize=(128,128))
;Resize=(128,128))
;Resize=(128,128))
;Resize=(128,128))