ದೊಡ್ಡಣಗುಡ್ಡೆ ಶ್ರೀ ಕ್ಷೇತ್ರ: ವೈಭವದ ಶಾರದಾ ಪೂಜೆ ಆರಂಭ

| Published : Sep 30 2025, 12:02 AM IST

ಸಾರಾಂಶ

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪುರೋಹಿತ ಗಣೇಶ್ ಸರಳಾಯ, ವಿಖ್ಯಾತ್ ಭಟ್ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಸೋಮವಾರ ಶಾರದಾ ಪೂಜೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪುರೋಹಿತ ಗಣೇಶ್ ಸರಳಾಯ, ವಿಖ್ಯಾತ್ ಭಟ್ ನೇತೃತ್ವದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಸೋಮವಾರ ಶಾರದಾ ಪೂಜೆಗೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ದೀಪೇಶ್ ನಾಡರ್ ಮನೆಯವರು ಹಾಗೂ ಆನಂದ ಬಾಯರಿ ಮನೆಯವರಿಂದ ಜೋಡಿ ಚಂಡಿಕಾಯಾಗ, ಮಣಿಪಾಲದ ಪದ್ಮಿನಿ ರಾಜೇಶ್ ಅವರಿಂದ ದುರ್ಗಾ ನಮಸ್ಕಾರ ಪೂಜೆ ಸಮರ್ಪಿಸಲ್ಪಟ್ಟಿತು. ಕ್ಷೇತ್ರದ ವಿಶೇಷ ಸೇವೆಗಳಲ್ಲಿ ಒಂದಾದ ನೃತ್ಯ ಸೇವೆಯನ್ನು ಕನಿಷ್ಕಾ, ಮೀನಾಲ್, ಸಾನ್ವಿ ಬಿ., ಅಂಶಿಕಾ, ಕೃತಿಕಾ, ಸೌಮ್ಯಾ ಮಧ್ಯಾಹ್ನ ಮತ್ತು ರಾತ್ರಿ ದೇವಿಗೆ ಅಭಿಮುಖವಾಗಿ ಸಮರ್ಪಿಸಿದರು.ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ, ದೇವಿಯನ್ನು ವೀಣಾಪಾಣಿ ಶಾರದೆಯಾಗಿ ಅಲಂಕರಿಸಿದ್ದರು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ ಮಹಾಪೂಜೆ ನೆರವೇರಿಸಿದರು. ನವಶಕ್ತಿ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ನವರಾತ್ರಿ ಸಂಭ್ರಮಕ್ಕೆ ಮೆರಗು ನೀಡುವಂತೆ ಕ್ಷೇತ್ರದ ಒಳಾಂಗಣ, ಹೊರ ಪ್ರಾಂಗಣ, ಪ್ರವೇಶದ್ವಾರ, ಮುಖಮಂಟಪ, ಗಾಯತ್ರಿ ಧ್ಯಾನ ಪೀಠ, ಕಪಿಲ ಗೋ ಮಂದಿರ, ಮುಖ್ಯರಸ್ತೆಯಿಂದ ಕ್ಷೇತ್ರದ ದ್ವಾರದ ವರೆಗೆ ಹಾಗೂ ಕ್ಷೇತ್ರದ ಸುತ್ತಲೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ದೇವರ ದರ್ಶನಕ್ಕಾಗಿ ಬೆಳಗ್ಗಿನಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಸಾಕಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.ಶಾಸಕ ಯಶ್ಪಾಲ್ ಭೇಟಿ:

ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ಸ್ವಾಗತಿಸಿ ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ಅನಂತರ ಶಾಸಕರು ಮಾತನಾಡಿ, ಕ್ಷೇತ್ರದಲ್ಲಿ ನವರಾತ್ರಿ ಪರ್ವಕಾಲದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ನಸಂತರ್ಪಣೆಗೆ ಕ್ಷೇತ್ರ ಪ್ರಸಿದ್ಧಿ ಪಡೆಯುತ್ತಿದೆ. ನವರಾತ್ರಿ ಕಾಲದಲ್ಲಿ ಭಕ್ತರೆಲ್ಲರ ಬಯಕೆಯನ್ನು ತಾಯಿ ಈಡೇರಿಸಲಿ ಎಂದು ಪ್ರಾರ್ಥಿಸಿದರು. ಸ್ವಾತಿ ಪ್ರತೀಕ್ ಉಪಸ್ಥಿತರಿದ್ದರು.