ಸಾರಾಂಶ
ಗ್ರಾಮ ಸಮಿತಿ ತರಬೇತಿ ವರ್ಗ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುವ ಕುರಿತು ಅನೇಕ ಮಾಹಿತಿ ನೀಡಲಾಯಿತು.
ಧಾರವಾಡ: ಇಲ್ಲಿಯ ಆದರ್ಶ ಬಾಲಿಕಾ ವಿದ್ಯಾಲಯದಲ್ಲಿ ಕರ್ನಾಟಕ ಇನಕ್ಯೂಬೇಶನ್ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಗ್ರಾಮ ಸಮಿತಿ ತರಬೇತಿ ವರ್ಗ ಯಶಸ್ವಿಯಾಯಿತು. ತರಬೇತಿಗೆ 12 ಗ್ರಾಮಗಳಿಂದ 14 ಪುರುಷರು ಮತ್ತು 17 ಮಹಿಳೆಯರು ಹಾಗೂ 12 ಜನ ಗ್ರಾಮ ವಿಕಾಸ ಕಾರ್ಯಕರ್ತರು ಹಾಜರಿದ್ದರು.
ಗ್ರಾಮ ವಿಕಾಸ ಪ್ರಾಂತ ಪ್ರಮುಖ ದಾಮೋದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮಗಳಲ್ಲಿ ನಮ್ಮ ಹಿರಿಯರು ಪಾಲಿಸಿದ ಸಂಪ್ರದಾಯಗಳು ಮತ್ತು ಆಧುನಿಕ ಸಂಪ್ರದಾಯದಿಂದ ಸಂಬಂಧಗಳ ಮೇಲಾಗುತ್ತಿರುವ ಬಿರುಕುಗಳು, ನಮ್ಮ ಗ್ರಾಮ ಸುಧಾರಿಸಬೇಕಾದರೆ ನಾವು ತೆಗೆದುಕೊಳ್ಳಬೇಕಾದ ಕಾರ್ಯಗಳು, ಶಿಕ್ಷಣ ಸುಧಾರಣೆ, ಉತ್ತಮ ಆಹಾರಗಳನ್ನು ಬೆಳೆಯುವುದು ಮತ್ತು ಅದನ್ನು ಬಳಸುವುದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ತಿಳಿಸಿದರು.ಕರ್ನಾಟಕ ಇನ್ ಕ್ಯೂಬೇಶನ್ ಫೌಂಡೇಷನ್ (ಕೆಐಎಫ್) ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಪ್ರಾಥಮಿಕವಾಗಿ ಕೃಷಿ ತರಬೇತಿ, ಕೌಶಲ್ಯಾಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಸ್ಥಳೀಯ ಗ್ರಾಮೀಣ ಜನರ ಜೀವನಮಟ್ಟ ಹೆಚ್ಚಿಸುವ ಕೆಲಸಗಳಲ್ಲಿ ತೊಡಗಿಕೊಂಡಿದೆ ಎಂದರು.ಕೆಐಎಫ್ ಸಂಸ್ಥೆ ಅಧ್ಯಕ್ಷ ಅಶ್ವಿನ ಭೂಸಾರೆ, ತಂಡದಲ್ಲಿ ಕೆಲಸ ಮಾಡುವುದು ಹೇಗೆ, ಗ್ರಾಮ ಸುಧಾರಣೆಗಾಗಿ ತಂಡದ ಪಾತ್ರವೇನು, ಗ್ರಾಮ ವಿಕಾಸ ಕಾರ್ಯಗಳಲ್ಲಿ ಗ್ರಾಮ ಸಮಿತಿಯ ಜವಾಬ್ದಾರಿ ಏನಿರುತ್ತದೆ, ಅಕ್ಷರ ಅಭಿಯಾನ ಮೂಲಕ ಮಕ್ಕಳ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವುದು, ತರಬೇತಿ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸುವ ಕುರಿತು ಅನೇಕ ಯೋಜನೆಗಳನ್ನು ರೂಪಿಸಿ ಕಾರ್ಯನಿರ್ವಹಿಸಬೇಕು ಎಂದು ಗ್ರಾಮ ಸಮಿತಿಯ ಸದಸ್ಯರಿಗೆ ತಿಳಿಸಿದರು.