ಸೂಸಲವಾನಿಯಲ್ಲಿ ತಾಲೂಕು ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಡಿ.ಎಸ್.ಎಸ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.

ತಾಲೂಕಿನ ಸೂಸಲವಾನಿಯಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸರ್ಕಾರ ದಲಿತ ಸಮುದಾಯದವರಿಗಾಗಿ ಹಲವಾರು ಸೌಲಭ್ಯ ನೀಡುತ್ತಿದೆ. ಇದನ್ನು ಉಪಯೋಗಿಸಿಕೊಳ್ಳಬೇಕು. ದಲಿತ ಸಮುದಾಯದವರು, ಬಡವರು, ಶೋಷಿತ ವರ್ಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಅವರಿಗೆ ಮೇಲ್ವರ್ಗದ ಜನರಂತೆ ಎಲ್ಲಾ ಸವಲತ್ತುಗಳು ದೊರಕುವಂತಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು. ಡಾ.ಅಂಬೇಡ್ಕರ್ ನೀಡಿದ ಸಂವಿಧಾನ ಅತ್ಯಂತ ಶ್ರೇಷ್ಟವಾಗಿದೆ. ದಲಿತ ಸಮುದಾಯವರು ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಸಧೃಢರಾಗಬೇಕೆಂದು ಹಲವಾರು ಯೋಜನೆಗಳನ್ನು ರೂಪಿಸಿದ್ದರು ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಡಿ.ಎಸ್.ಎಸ್.ಜಿಲ್ಲಾ ಸಂಚಾಲಕ ಡಿ.ರಾಮು ಮಾತನಾಡಿ, ನಮ್ಮ ಸಮುದಾಯದ ಜನರಿಗೆ ಹಕ್ಕುಪತ್ರ, ಜಾತಿ ಪ್ರಮಾಣ ಪತ್ರಗಳನ್ನು ನೀಡುವಂತೆ ಎಷ್ಟು ಬಾರಿ ಅರ್ಜಿಗಳು ನೀಡಿದರೂ ಸಿಗುತ್ತಿಲ್ಲ ಹಾಗೂ ನಮ್ಮ ಜನರಿಗೆ ಸರ್ಕಾರದ ಸವಲತ್ತುಗಳು ಸಿಗುತ್ತಿಲ್ಲ. ಆದ್ದರಿಂದ ಮುಂದಿನ ತಿಂಗಳಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಮಾಡಲು ನಮ್ಮ ಸಂಘಟನೆ ತೀರ್ಮಾನಿಸಿದೆ ಎಂದರು.


ಡಿಎಸ್ಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಪವಿತ್ರದೇವರಾಜ್ ಮಾತನಾಡಿ, ಇಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭಾರತ ಮಾತ್ರವಲ್ಲದೆ ಸುಮಾರು 143 ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸುತ್ತೇವೆ ಎಂದರೆ ಅಂಬೇಡ್ಕರ್ ಅವರ ಸಾಧನೆಗೆ ಇಡೀ ಜಗತ್ತೇ ತಲೆಬಾಗಿದೆ ಎಂದರ್ಥವಾಗುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಪದವಿಗಳನ್ನು ಪಡೆದಿರುವ ವಿಶ್ವದ ಮೊದಲ ವ್ಯಕ್ತಿ ಅಂಬೇಡ್ಕರ್‌. ವಿದೇಶದಲ್ಲಿ ಪಿಎಚ್.ಡಿ ಮುಗಿಸಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರು. ಸಂವಿಧಾನವನ್ನು ರಚಿಸಿ ಕೋಟ್ಯಾಂತರ ಜನರ ಹಣೆಯ ಬರಹವನ್ನೇ ಬದಲಾಯಿಸಿದ ಮಹಾನ್ ಶಿಲ್ಪಿ ಡಾ.ಅಂಬೇಡ್ಕರ್ ರವರು ಎಂದರು. ಅತಿಥಿಗಳಾಗಿ ಹಿರಿಯ ಮುಖಂಡ ವಾಸಪ್ಪ, ಸೂಸಲವಾನಿ ಗ್ರಾಮದ ಡಿ.ಎಸ್.ಎಸ್ ಸಂಚಾಲಕರಾದ ಸಿಜು, ವಿಜು, ನಾಗಲಾಪುರ ಗ್ರಾಮದ ಡಿ.ಎಸ್.ಎಸ್. ಕಾರ್ಯದರ್ಶಿ ಶಿವು, ಸಂಚಾಲಕ ಸುಧಾಕರ್, ರಾಗಿಣಿ, ಸುನಿತಾ ಇದ್ದರು.