ಡಾ.ಕಲಬುರ್ಗಿ ಜಾಗತಿಕಮಟ್ಟದ ಸಮಗ್ರ ಸಂಶೋಧಕ

| Published : Jan 05 2025, 01:30 AM IST

ಸಾರಾಂಶ

ನಾನು ಹುಟ್ಟಿದ್ದು ಸಾಯಲಿಕ್ಕಲ್ಲ, ಸೂರ್ಯ-ಚಂದ್ರರ ಕೂಡ ಬದುಕಲಿಕ್ಕೆಎನ್ನುವ ಡಾ.ಎಂ.ಎಂ.ಕಲಬುರ್ಗಿಯವರ ಮಾತು ಅತ್ಯಂತ ಅರ್ಥ ಪೂರ್ಣವಾಗಿದೆ. ಅವರೊಬ್ಬ ಜಾಗತಿಕಮಟ್ಟದ ಸಮಗ್ರ ಸಂಶೋಧಕರಾಗಿದ್ದರು ಎಂದು ಕರ್ನಾಟಕ ಸರ್ಕಾರದ ಅಧಿನದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ನಾನು ಹುಟ್ಟಿದ್ದು ಸಾಯಲಿಕ್ಕಲ್ಲ, ಸೂರ್ಯ-ಚಂದ್ರರ ಕೂಡ ಬದುಕಲಿಕ್ಕೆಎನ್ನುವ ಡಾ.ಎಂ.ಎಂ.ಕಲಬುರ್ಗಿಯವರ ಮಾತು ಅತ್ಯಂತ ಅರ್ಥ ಪೂರ್ಣವಾಗಿದೆ. ಅವರೊಬ್ಬ ಜಾಗತಿಕಮಟ್ಟದ ಸಮಗ್ರ ಸಂಶೋಧಕರಾಗಿದ್ದರು ಎಂದು ಕರ್ನಾಟಕ ಸರ್ಕಾರದ ಅಧಿನದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಹೇಳಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಕರ್ನಾಟಕ ಸರ್ಕಾರದ ಧಾರವಾಡ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ವಿಜಯಪುರದ ಕಲಬುರ್ಗಿ ಫೌಂಡೇಶನ್‌ಗಳ ಸಹಯೋಗದಲ್ಲಿ ನಡೆದ ಡಾ.ಎಂ.ಎಂ.ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತಾದ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲಬುರ್ಗಿ ಅವರಲ್ಲಿ ಅಧ್ಯಯನ, ಬೋಧನೆ, ಸಂಶೋಧನೆ, ಯೋಜನೆ ಮತ್ತು ಸಮಾಜಮುಖಿ ಎಂಬ ಅನೇಕ ಗುಣಗಳನ್ನು ನಾವು ಕಂಡಿದ್ದೇವೆ. ನನ್ನ ಬಲ, ಛಲ ನನ್ನ ಬದುಕಿಗೆ ನೀರು, ಗೊಬ್ಬರವಾಗಿವೆ ಎಂಬ ಅವರ ಮಾತುಗಳು ಅವರ ಭಾವನೆಗಿಂತ ಬೌದ್ಧಿಕ ಒತ್ತಡವನ್ನು ಅವರ ಅನೇಕ ಕವನ ಸಂಕಲನಗಳಲ್ಲಿ ಕಾಣುತ್ತೇವೆ ಎಂದರು.ಪ್ರತಿಷ್ಠಾನದ ಸದಸ್ಯೆ ಹನುಮಾಕ್ಷಿ ಗೋಗಿ ಆಶಯ ನುಡಿಗಳನ್ನಾಡಿ, ಡಾ.ಎಂ.ಎಂ.ಕಲಬುರ್ಗಿ ಅವರು ಕನ್ನಡ ವಿಷಯದ ಪ್ರಾಧ್ಯಾಪಕರು ಆಗಿದ್ದರು. ನಂತರ ಅವರು ಇತಿಹಾಸದ ಸಂಶೋಧನೆಗೆ ಹೊರಳಿದ್ದೆ ಒಂದು ದೊಡ್ಡ ಇತಿಹಾಸ. ಅವರದು ಚಲನಶೀಲವಾದ ಸಂಶೋಧನೆ. ಸುಮಾರು 120ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕಾರ್ಯ ಶ್ಲಾಘನೀಯ. ಈ ನಾಡಿನ ಸುಮಾರು 15ಕ್ಕೂ ಹೆಚ್ಚು ಜನ ಲೇಖಕರು ಅವರ ಹೆಸರಿನ ಮೂಲಕವೇ ಕೃತಿ ರಚನೆ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದಕೈಗನ್ನಡಿ.ಬಸವಣ್ಣನವರ ಕುರಿತಾಗಿ ಅವರ ನೀಡಿದ ಶಾಸನ ಅನೇಕ ಸಂಶೋಧಕರಿಗೆ ಕೈಪಿಡಿಯಾಗಿವೆ ಎಂದರು.ಈ ಸಂದರ್ಭದಲ್ಲಿ ಚಡಚಣದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಎಸ್.ಮಾಗಣಗೇರಿ ಅವರು ಕಲಬುರ್ಗಿ ಅವರು ರಚಿಸಿದ ಕೆಟ್ಟಿತ್ತು ಕಲ್ಯಾಣ ಎಂಬ ನಾಟಕದ ಕುರಿತಾಗಿ ಮಾತನಾಡಿ, ಶರಣ ಪರಂಪರೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಡಾ.ಕಲಬುರ್ಗಿ ಅವರು ಕಲ್ಯಾಣದ ಅವಸಾನದ ದಿನಗಳನ್ನು ನಾಟಕರೂಪದಲ್ಲಿ ಹೇಳಿದ್ದಾರೆ. ಶರಣರ ಚಳುವಳಿಯ ಅತ್ಯಂದ ಬಗ್ಗೆ ಅನೇಕ ಕೃತಿಗಳು, ನಾಟಕಗಳು ಬಂದಿವೆಯಾದರು ಈ ನಾಟಕ ಅತ್ಯಂತ ಸೃಜನಶೀಲತೆ ಮತ್ತು ಶರಣರ ಮೇಲಿರುವ ಒಳಸಂಚನ್ನು ಪ್ರಸ್ತಾಪಿಸುತ್ತದೆ. ಒಟ್ಟು 40 ದೃಶ್ಯಗಳು ಇರುವ ಈ ನಾಟಕ ಅಗ್ರಹಾರ ಸಂಸ್ಕೃತಿ, ದೇಗುವ ಸಂಸ್ಕೃತಿ ಹಾಗೂ ರಾಜ ಸಂಸ್ಕೃತಿಯನ್ನು ಬಿಚ್ಚಿಡುತ್ತದೆ ಎಂದು ವಿವರಿಸಿದರು.ಡಾ.ಕಲಬುರ್ಗಿ ಅವರ ಕಾವ್ಯವಾದ ನೀರು ನೀರಡಿಸಿತ್ತು ಮತ್ತು ನೀರಾಗ ನಿಂತೀನಿ ನಿರಡಿಸಿ ಕಾವ್ಯವದ ಕುರಿತು ಯುವ ಸಾಹಿತಿ ಮನು ಪತ್ತಾರ ಕಲಕೇರಿ ಮಾತನಾಡಿ, ಕವಿಯಾದವನು ಭಾವನೆಗಳನ್ನು ಕಲ್ಪಿಸಿಕೊಂಡು ಬರೆಯುವದು ಬೇರೆ, ಬದುಕಿ ಬರೆಯುವುದು ಬೇರೆ. ನೀರು ನೀರಡಿಸಿತ್ತು ಕವನ ಸಂಕಲನದಲ್ಲಿನ ಎಲ್ಲ ಕನವಗಳು ಸಾಮಾನ್ಯವಾಗಿ ಅವರು ಅವರ ಬದುಕಿನಲ್ಲಿ ಕಂಡ ಭಾವನೆಗಳ ಭಾಷಾ ಶಿಲ್ಪವೆನಿಸಿವೆ. ಅಲ್ಲಮ ಪ್ರಭುವಿನ ವಿಚಾರಗಳು ಇಲ್ಲಿ ಮೂಡಿ ಬಂದಿವೆ. ನೀರಾಗ ನಿಂತೀನಿ ನೀರಡಿಸಿ ಕಾವ್ಯಾ ಸಂಕಲನದಲ್ಲಿ ನೀರು ಸಾಮಾನ್ಯವಾಗಿ ದಾಹವನ್ನುತೀರಿಸುವುದು ಅದರ ಧರ್ಮ. ಆದರೆ, ಈ ವೈಪರಿತ್ಯದಿಂದ ಕೂಡಿದ ಈ ಸಮಾಜ ಸತ್ಯವನ್ನು ಹೇಳಿದರೆ ಅದನ್ನು ಅರಗಿಸಿಕೊದೆ ಅಕ್ರಮಣಕಾರಿ ಮನೋಧೋರಣೆಯನ್ನು ತೋರಿಸುತ್ತದೆ ಎಂಬ ಭಾವನೆಗಳನ್ನು ಹೋರಕಾಕಿದ್ದಾರೆ ಎಂದರು.ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ನ್ಯೂಜಿಲೆಂಡಿನ ಅಕ್ಲಂಡನ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಕಲಬುರ್ಗಿ ಅವರು ಉದ್ಘಾಟಿಸಿದರು. ಪ್ರತಿಷ್ಠಾನದ ಸದಸ್ಯ ಗದುಗಿನ ಪ್ರೊ.ಚಂದ್ರಶೇಖರ ವಸ್ತ್ರದ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಪಡಶೆಟ್ಟಿ ಸ್ವಾಗತಿಸಿದರು. ಶಿವಲಿಂಗ ಕಲಬುರ್ಗಿ ವಂದಿಸಿದರು. ಶಿಕ್ಷಕ ಚಿದಂಬರ ಬಂಡಗಾರ ನಿರೂಪಿಸಿದರು.ಡಾ.ವಿಕ್ರಮ ವಿಸಾಜಿ ರಚನೆಯ, ಪ್ರವೀಣರೆಡ್ಡಿ ಗುಂಜಹಳ್ಳಿ ನಿರ್ದೇಶನದ ಡಾ.ಕಲಬುರ್ಗಿಅವರ ಕುರಿತಾದ ರಕ್ತ ವಿಲಾಪ ನಾಟಕ ಜನಮನ ಸುರೆಗೊಂಡಿತು.

ಮುಂಬರುವ ದಿನಗಳಲ್ಲಿ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದಿಂದ ಅವರ ಸಾಹಿತ್ಯ ಮತ್ತು ಅವರ ವ್ಯಕ್ತಿತವದ ಕುರಿತಾಗಿ ರಾಜ್ಯ ವ್ಯಾಪ್ತಿ ಕಾಲೇಜಿಗೊಂದು ಕಾರ್ಯಕ್ರಮ ಹಾಗೂ ಅವರು ರಚಿಸಿದ ನಾಟಕಗಳನ್ನು ರಂಗ ಸಜ್ಜಿಕೆಯಲ್ಲಿ ಮೂಡಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.

-ಡಾ.ವೀರಣ್ಣರಾಜೂರ,
ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು.