ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ಡಾ. ಸಂಜಯ ನಾಯಕ ನೇಮಕ

| Published : May 07 2025, 12:46 AM IST

ಸಾರಾಂಶ

ಡಾ. ಸಂಜಯ ನಾಯಕ ಅವರ ಸಮಾಜ ಸೇವೆ ಹಾಗೂ ಸಂಘಟನಾ ಶಕ್ತಿ ಗುರುತಿಸಿ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ ಅವರು ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ.

ಹಾವೇರಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ಡಾ. ಸಂಜಯ ನಾಯಕ ಅವರನ್ನು ನೇಮಕಗೊಳಿಸಲಾಗಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ಸಂತೋಷ ಭಟ್ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ. ಸಂಜಯ ನಾಯಕ ಅವರ ಸಮಾಜ ಸೇವೆ ಹಾಗೂ ಸಂಘಟನಾ ಶಕ್ತಿ ಗುರುತಿಸಿ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ ಅವರು ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಬ್ರಾಹ್ಮಣ ಸಮಾಜದವರಿದ್ದು, ಕೇವಲ 1700 ಜನರು ಮಾತ್ರ ಮಹಾಸಭಾದ ಸದಸ್ಯತ್ವ ಪಡೆದಿದ್ದಾರೆ. ಹೀಗಾಗಿ ಡಾ. ಸಂಜಯ ನಾಯಕ ಅವರು ತಮಗೆ ಸಿಕ್ಕಿರುವ ಜವಾಬ್ದಾರಿಯ ಸದ್ಬಳಕೆ ಪಡೆಸಿಕೊಂಡು ಜಿಲ್ಲೆಯಲ್ಲಿ ಮಹಾಸಭಾ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಆದ್ಯತೆ ನೀಡಬೇಕು. ಸಮಾಜದವರಲ್ಲಿ ಒಗ್ಗಟ್ಟು ಅಗತ್ಯವಿದ್ದು, ಜಾತಿ ಗಣತಿ ಸಂದರ್ಭದಲ್ಲಿ ಒಳಪಂಗಡಗಳನ್ನು ಕೈಬಿಟ್ಟು ಕೇವಲ ಹಿಂದು ಬ್ರಾಹ್ಮಣ ಎಂದು ಸೇರಿಸಲು ಮನವಿ ಮಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ನೇಮಗೊಂಡಿರುವ ಡಾ. ಸಂಜಯ ನಾಯಕ ಮಾತನಾಡಿ, ಇತ್ತೀಚೆಗೆ ನಡೆದ ಸಮಾಜದ ಜಿಲ್ಲಾ ಪ್ರತಿನಿಧಿ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಮಹಾಸಭಾದ ಅಧ್ಯಕ್ಷರು ನನ್ನನ್ನು ಗುರುತಿಸಿ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಈ ಸ್ಥಾನದ ಜವಾಬ್ದಾರಿ ಅರಿತು ಜಿಲ್ಲೆಯಲ್ಲಿ ಸಮಾಜವನ್ನು ಸಂಘಟಿಸಲು ಶ್ರಮಿಸುತ್ತೇನೆ. ಕಳೆದ ಚುನಾವಣೆ ವೇಳೆ ಹೇಳಿದಂತೆ ಸ್ವಂತ ಖರ್ಚಿನಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 25 ಜನರ ಸದಸ್ಯತ್ವ ಮಾಡಿಸುತ್ತೇನೆ. ಅಲ್ಲದೇ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲಾಗುವುದು. ಜಿಲ್ಲೆಯ ಸಮಾಜದವರು ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಂಜೀವ ಶಿರಹಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜಕ್ಕೆ ಅಪಮಾನ ಮಾಡುವ ಘಟನೆಗಳು ನಡೆಯುತ್ತಿವೆ. ಕಲಬುರಗಿಯಲ್ಲಿ ಮತ್ತೆ ಸಮಾಜದ ವಿದ್ಯಾರ್ಥಿಯ ಜನಿವಾರ ತೆಗಿಸಿರುವ ಘಟನೆ ನಡೆದಿದ್ದು, ರಾಜ್ಯದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದಿನ ಘಟನೆಯಿಂದ ಎಚ್ಚೆತ್ತುಕೊಳ್ಳದೇ ಮತ್ತೆ ಬ್ರಾಹ್ಮಣ ಸಮಾಜಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ. ಕೂಡಲೇ ಸರ್ಕಾರ ಕ್ರಮಕೈಗೊಳ್ಳುವ ಮೂಲಕ ಮತ್ತೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಗುರುರಾಜ ಶಿರಹಟ್ಟಿ, ಶ್ರೀನಿವಾಸ ಶಿವಪೂಜಿ, ಉಮೇಶ ಹರಿಸತ್ಯನವರ, ಧೀರೇಂದ್ರ ಪಂಚಭಾವಿ, ಪ್ರದೀಪ ಪಾಟೀಲ ಇತರರು ಇದ್ದರು.