ಬದುಕಿನೊಂದಿಗೆ ಬೆಸೆದುಕೊಂಡಿರುವ ನಾಟಕಗಳು

| Published : May 13 2024, 12:06 AM IST

ಸಾರಾಂಶ

ಹೊಸಕೋಟೆ: ನಾಲ್ಕು ಶತಮಾನಗಳು ಕಳೆದರೂ ಫ್ರೆಂಚ್ ನಾಟಕಕಾರ ಮೋಲಿಯರ್‌ ನಾಟಕಗಳ ಮಹತ್ವ ಕುಸಿಯುವುದಿಲ್ಲ ಎಂದು ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ತಿಳಿಸಿದರು.

ಹೊಸಕೋಟೆ: ನಾಲ್ಕು ಶತಮಾನಗಳು ಕಳೆದರೂ ಫ್ರೆಂಚ್ ನಾಟಕಕಾರ ಮೋಲಿಯರ್‌ ನಾಟಕಗಳ ಮಹತ್ವ ಕುಸಿಯುವುದಿಲ್ಲ ಎಂದು ಜನಪದರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಾಪಣ್ಣ ತಿಳಿಸಿದರು.

ನಗರದ ಹೊರವಲಯದ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಮೋಲಿಯರ್‌ನ ಹಾಸ್ಯನಾಟಕ ಅನುಮಾನದ ಅವಾಂತರ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳ ಪ್ರಸಂಗಗಳು ಹಲವಾರು ರೀತಿಯಲ್ಲಿ ಮನುಷ್ಯನ ಜೀವನದ ಜೊತೆಗೆ ಬೆಸೆದುಕೊಂಡಿರುತ್ತದೆ. ನಾಟಕಗಳ ಅಭಿನಯಕ್ಕಾಗಿಯೇ ಜನಪದರು ರಂಗಮಂದಿರ ನಿರ್ಮಿಸಿ ಪ್ರತಿ ತಿಂಗಳು ವಿವಿಧ ಕಲಾವಿದರಿಂದ ಪೌರಾಣಿಕ, ಸಾಮಾಜಿಕ, ಹಾಸ್ಯಭರಿತ ನಾಟಕಗಳನ್ನು ಅಭಿಯಿಸಲು ರಂಗಮಂದಿರವನ್ನು ಮುಡಿಪಾಗಿಟ್ಟಿದ್ದೇವೆ ಎಂದರು.

ಬೆಂಗಳೂರಿನ ಅಂತರಂಗ ಬಹಿರಂಗದ ತಂಡದವರು ಅಭಿನಯಿಸಿದ ಅನುಮಾನದ ಅವಾಂತರ ನಾಟಕವು ಮೋಲಿಯರ್ 1660ರ ಮಧ್ಯದಲ್ಲಿ ಬರೆದ ದಿ ಇಮ್ಯಾಜಿನರಿ ಕಕ್ಕೋಲ್ಡ್ ಎಂಬ ಫ್ರೆಂಚ್ ಏಕಾಂಕ ನಾಟಕದ ಕನ್ನಡದ ಅವತರಣಿಕೆಯಾಗಿತ್ತು. ಇದೊಂದು ಅಪ್ಪಟ ಕನ್ನಡದ ನಾಟಕವೆನ್ನುವಷ್ಟರ ಮಟ್ಟಿಗೆ ಇದನ್ನು ಎಂ ರಾಮರಾವ್‌ ಕನ್ನಡಕ್ಕೆ ಭಾಷಾಂತರಿಸಿದರೆ, ಎಸ್ ವಿಕಾಸ್‌ ಅದ್ಭುತವಾಗಿ ನಿದೇಶಿಸಿದ್ದಾರೆ. ಯುವ ದಂಪತಿಗಳ ನಡುವೆ ಹುಟ್ಟುವ ಅನುಮಾನ ಒಂದು ಕಡೆಯಾದರೆ ಮತ್ತೊಂದೆಡೆ ಪರಸ್ಪರ ಪ್ರೀತಿಸಿ ಮದುವೆಯಾಗ ಬಯಸುತ್ತಿರುವ ಜೋಡಿಗಳ ನಡುವೆ ಹುಟ್ಟುವ ಅನುಮಾನ ಜೊತೆ ಜೊತೆಗೆ ಪೆನ್ ಡ್ರೈವ್, ನುಗ್ಗೆಕಾಯಿ, ನಿಂಬೆ ಹಣ್ಣಿನ ಪ್ರಸ್ತಾಪ ಕಲಸುಮೇಲೋಗರವಾಗಿ ಹುಟ್ಟುವ ಹಾಸ್ಯ ಪ್ರೇಕ್ಷರನ್ನು ನಗೆಗಡಲಲ್ಲಿ ತಾಲಾಡಿಸಿತು.

ತುಂಬಿದ ರಂಗಮಂದಿರದಲ್ಲಿ ಪ್ರೇಕ್ಷಕರ ಕರತಾಡನ ಸಿಳ್ಳೆ ಧ್ವನಿಗೆ ನಿರಂತರವಾಗಿ ಮುಂದುವರೆದು, ಅನುಮಾನ ಪರಿಹಾರವಾಗಿ ಸುಖಾಂತದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಾಟಕದಲ್ಲಿ ಅಭಿನಯಿಸಿದ ಎಲ್ಲ ಕಲಾವಿದರೂ ಅತ್ಯಂತ ಲವಲವಿಕೆಯಿಂದ ಅಭಿನಯಿಸಿ ಪ್ರೇಕ್ಷಕರ ಕರತಾಡತನ ಗಿಟ್ಟಿಸಿಕೊಂಡರು.

ಈ ಸಂದರ್ಭದಲ್ಲಿ ಜನಪದರು ಸಾಂಸ್ಕೃತಿಕ ವೇದಿಕೆ ಸದಸ್ಯರಾದ ದೊಡ್ಡಬನಹಳ್ಳಿ ಸಿದ್ಧೇಶ್ವರ್, ಎಂ.ಸುರೇಶ್, ಶಿವಕುಮಾರ್, ಬಾಗೇಪಲ್ಲಿ ಕೃಷ್ಣಮೂರ್ತಿ, ಸಾಹಿತಿಗಳಾದ, ವಸಂತಕುಮಾರ್ ಕಲ್ಯಾಣಿ, ಸುರೇಶ ಸಂಕೃತಿ, ಎಚ್.ಬಿ.ಚಂದ್ರಶೇಖರ್ ಉಪಸ್ಥಿತರಿದ್ದರು.12 ಹೆಚ್‌ಎಸ್‌ಕೆ 1

ಹೊಸಕೋಟೆ ಹೊರವಲಯದ ನಿಂಬೆಕಾಯಿಪುರದ ಜನಪದರು ಸಾಂಸ್ಕೃತಿಕ ವೇದಿಕೆ ಆವರಣದಲ್ಲಿ ನಡೆದ ಮೋಲಿಯರ್‌ನ ಹಾಸ್ಯನಾಟಕ ಅನುಮಾನದ ಅವಾಂತರ ನಾಟಕದಲ್ಲಿ ಅಭಿನಯಿಸಿದ ಕಲಾವಿದರು.