ಮಕ್ಕಳನ್ನು ಸಾಂಸ್ಕೃತಿಕವಾಗಿ ರೂಪಿಸಿ, ಕಲೆಗಳನ್ನು ನಶಿಸದಂತೆ ತಡೆಯಿರಿ: ಜಯರಾಂ ರಾಯಪುರ

| Published : Jan 16 2024, 01:49 AM IST

ಮಕ್ಕಳನ್ನು ಸಾಂಸ್ಕೃತಿಕವಾಗಿ ರೂಪಿಸಿ, ಕಲೆಗಳನ್ನು ನಶಿಸದಂತೆ ತಡೆಯಿರಿ: ಜಯರಾಂ ರಾಯಪುರ
Share this Article
  • FB
  • TW
  • Linkdin
  • Email

ಸಾರಾಂಶ

ರಂಗಭೂಮಿ ಚಟುವಟಿಕೆಗಳು ಮಕ್ಕಳಲ್ಲಿನ ಅಂತರಂಗದ ಭಯವನ್ನು ನಿವಾರಿಸಿ ಕ್ರಿಯಾಶೀಲಗೊಳಿಸುತ್ತದೆ. ಮೂಡಲಪಾಯ ಯಕ್ಷಗಾನ ಎಲ್ಲ ಜಾನಪದೀಯ ಕಲಾ ಪ್ರಕಾರಗಳಿಗೆ ಶಿಖರ. ಆದರೆ, ನಮ್ಮ ಅಸಡ್ಡೆಯಿಂದ ಅದು ಕಣ್ಮರೆಯಾಗಿದೆ. ಮೂಡಲಪಾಯ ಯಕ್ಷಗಾನ ಪರಿಷತ್ ಸ್ಥಾಪಿಸಿ ಮಣ್ಣಿನಲ್ಲಿ ಹೂತು ಹೋಗಿರುವ ಮೂಡಲಪಾಯವನ್ನು ಹೊರತೆಗೆಯುವ ಕೆಸಲ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಎಳೆಯ ವಯಸ್ಸಿನಲ್ಲೇ ಮಕ್ಕಳನ್ನು ಸಾಂಸ್ಕೃತಿಕವಾಗಿ ರೂಪಿಸಿದಾಗ ನಮ್ಮ ಪೂರ್ವಿಕರು ಕಟ್ಟಿಕೊಟ್ಟಿರುವ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗದಂತೆ ಮಾಡಬಹುದು ಎಂದು ಬೆಂಗಳೂರು ಜಲ ಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಹೇಳಿದರು.

ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು, ಮಂಡ್ಯದ ಕರ್ನಾಟಕ ಸಂಘ ಮತ್ತು ಉದಯರವಿ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಂಕ್ರಾತಿ ಮಕ್ಕಳ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ರಂಗಭೂಮಿ ಚಟುವಟಿಕೆಗಳು ಮಕ್ಕಳಲ್ಲಿನ ಅಂತರಂಗದ ಭಯವನ್ನು ನಿವಾರಿಸಿ ಕ್ರಿಯಾಶೀಲಗೊಳಿಸುತ್ತದೆ. ಮಕ್ಕಳು ವೇದಿಕೆಯಲ್ಲಿ ಪಾಲ್ಗೊಂಡರೆ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಮೂಡಲಪಾಯ ಯಕ್ಷಗಾನ ಎಲ್ಲ ಜಾನಪದೀಯ ಕಲಾ ಪ್ರಕಾರಗಳಿಗೆ ಶಿಖರ. ಆದರೆ, ನಮ್ಮ ಅಸಡ್ಡೆಯಿಂದ ಅದು ಕಣ್ಮರೆಯಾಗಿದೆ. ಕಳೆದು ಹೋಗಿರುವ ಈ ಕಲೆಯ ಪುನರುಜ್ಜೀವನಕ್ಕೆ ಕರ್ನಾಟಕ ಸಂಘ ಶ್ರಮಿಸುತ್ತಿದೆ. ಮೂಡಲಪಾಯ ಯಕ್ಷಗಾನ ಪರಿಷತ್ ಸ್ಥಾಪಿಸಿ ಮಣ್ಣಿನಲ್ಲಿ ಹೂತು ಹೋಗಿರುವ ಮೂಡಲಪಾಯವನ್ನು ಹೊರತೆಗೆಯುವ ಕೆಸಲ ಮಾಡಲಾಗುತ್ತಿದೆ ಎಂದರು.

ತಾಲೂಕಿನ ಅಕ್ಕಿಹೆಬ್ಬಾಳಿನಲ್ಲಿ ಉತ್ತಮ ರಂಗ ಮಂದಿರ ಇದೆ. ಆದರೆ, ತಾಲೂಕು ಕೇಂದ್ರ ಕೆ.ಆರ್.ಪೇಟೆ ಪಟ್ಟಣದಲ್ಲಿ ಒಂದು ಸುಸಜ್ಜಿತ ರಂಗಮಂದಿರ ಇಲ್ಲದಿರುವುದು ಕರ್ನಾಟಕ ಸರ್ಕಾರ ಮತ್ತು ಇಲ್ಲಿನ ಸಾಂಸ್ಕೃತಿಕ ಮನಸ್ಸುಗಳು ನಾಚಿಕೆ ಪಡಬೇಕಾದ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಮಾತನಾಡಿ, ಅಕ್ಷರ ಕಲಿತ ಮಂದಿ ಸಂಘಟಿತರಾಗಿ ಸಾಂಸ್ಕೃತಿಕ ಲೋಕವನ್ನು ಕಟ್ಟಿ ಬೆಳೆಸಬೇಕು. ಮಂಡ್ಯ ಜಿಲ್ಲೆಯಲ್ಲಿರುವಷ್ಟು ಜಾನಪದ ಕಲಾ ಪ್ರಕಾರಗಳು ರಾಜ್ಯದ ಯಾವುದೇ ಭಾಗದಲ್ಲೂ ಇಲ್ಲ. ಅವುಗಳನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದರು.

ಮಂಡ್ಯದ ಹನಕೆರೆ ವಿವೇಕಾ ವಿದ್ಯಾ ರಂಗತಂಡದ ಮಕ್ಕಳು ದೇವಿ ಮಹಾತ್ಮೆ ಮೂಡಲಪಾಯ ಯಕ್ಷಗಾನ ಪ್ರಸಂಗವನ್ನು ಅಭಿನಯಿಸಿದರೆ, ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕುವೆಂಪು ಅವರ ಬೆರಳ್ಗೆ - ಕೊರಳ್ ನಾಟಕವನ್ನು ಅಭಿನಯಿಸಿದರು.

ಮಂಡ್ಯದ ಸದ್ವಿದ್ಯಾ ರಂಗ ತಂಡದ ಮಕ್ಕಳು ಕುವೆಂಪು ವಿರಚಿತ ಬೊಮ್ಮನಹಳ್ಳಿಯ ಕಿಂದರಿ ಜೋಗಿ ಪ್ರದರ್ಶಿಸಿದರೆ ತಾಲೂಕಿನ ಶೆಟ್ಟನಾಯಕನಕೊಪ್ಪಲು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ಮಹಿರಾವಣ ಮೂಡಲಪಾಯ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.

ಮೂಡಲಪಾಯ ಯಕ್ಷಗಾನ ಕಲೆಯ ಬಾಗವತರಾದ ಎ.ಆರ್.ಪುಟ್ಟಸ್ವಾಮಿ, ನೊಣವಿನಕೆರೆ ಶಿವಣ್ಣ, ನಿರ್ದೇಶಕರಾದ ಗಿರೀಶ್ ಮೇಲುಕೋಟೆ, ಮಂಡ್ಯ ಪುನೀತ್, ಗಾಮನಹಳ್ಳಿ ಸ್ವಾಮಿ. ಮಂಜುನಾಥ್ ಬಡಿಗೇರ, ಅಜಯ್ ನೀನಾಸಂ, ಪ್ರಮೋದ್ ಶಿಗ್ಗಾಂವ್ ಮತ್ತಿತರರು ನಾಟಕೋತ್ಸವದ ನಿರ್ವಹಣೆ ಮಾಡಿದರು.

ಹರಳಹಳ್ಳಿ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ.ಲೋಕೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಉದಯರವಿ ಟ್ರಸ್ಟಿನ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕಾರ್ಯದರ್ಶಿ ಶೀಳನೆರೆ ಶಿವಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಚಾ.ಶಿ.ಜಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್ ಮತ್ತಿತರರಿದ್ದರು.