ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ದೃಶ್ಯ ಮಾಧ್ಯಮದ ವ್ಯಾಮೋಹ ಹಾಗೂ ಧಾರಾವಾಹಿಗಳಿಗೆ ಜನರು ಹೆಚ್ಚಿನ ಒತ್ತು ಕೊಡುತ್ತಿರುವ ಕಾರಣ ರಂಗಭೂಮಿ ಕಲೆ ನಶಿಸುತ್ತಿದೆ ಎಂದುಮಂಡ್ಯ ಜಿಲ್ಲೆಯ ವದೆ ಸಮುದ್ರ ಗ್ರಾಮದ ರಂಗ ನಿರ್ದೇಶಕ, ಹರಿಕಥೆ ವಿದ್ವಾಂಸ ವಿ.ಸಿ. ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ‘ರಂಗ ಕಲಾಭೂಷಣ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.ದೃಶ್ಯ ಮಾಧ್ಯಮದ ವ್ಯಾಮೋಹ ಹಾಗೂ ಧಾರಾವಾಹಿಗಳಿಗೆ ಜನರು ಹೆಚ್ಚು ಒತ್ತು ಕೊಡುತ್ತಿರುವುದರಿಂದ ಪೌರಾಣಿಕ ನಾಟಕಗಳು ನಶಿಸುತ್ತಾ ಬಂದಿದೆ. ಪೌರಾಣಿಕ ನಾಟಕಗಳು ಅಲ್ಲೊಂದು ಇಲ್ಲೊಂದು ಪ್ರದರ್ಶನವಾಗುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ನಾಟಕ ಕಲೆ ಅದರಲ್ಲೂ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸಿದಾಗ ಮನುಷ್ಯನ ಮನಸ್ಸು ಪರಿವರ್ತನೆಯಾಗಲು ಸಾಧ್ಯ. ನಿಜವಾದ ಕಲೆ, ಕಲಾವಿದರನ್ನು ನಾವು ಕಾಣುವುದು ಭಕ್ತಿ ಪ್ರಧಾನ ನಾಟಕಗಳಿಂದ ಮಾತ್ರ ಎಂದರು.
ನಾನು ನಮ್ಮ ತಂದೆಯಿಂದ ಪ್ರೇರಣೆಗೊಂಡು ಪೌರಾಣಿಕ ನಾಟಕ ಹಾಗೂ ಹರಿಕಥೆ ಮಾಡುತ್ತಿದ್ದೇನೆ. ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ನೀಡುವ ಮೂಲಕ ಗೌರವಿಸುತ್ತಿರುವ ಕವಿತಾ ರಾವ್ ಅವರಂತಹ ಸಂಘಟಕರು ಅಪರೂಪ ಎಂದು ತಿಳಿಸಿದರು.ಆಧುನಿಕ ಯುಗದಲ್ಲಿ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಮೂಲಕ ಕಲೆಯನ್ನು ಪೋಷಿಸುವ ಕೆಲಸ ಮಾಡಬೇಕು ಎಂದರು.
ನಾಟಕದಲ್ಲಿ ಬರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕು ಸಾಗಿಸಬೇಕು. ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ನಾಟಕ ಕಲೆಯನ್ನು ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಉತ್ತಮ ಮೌಲ್ಯ ಹಾಗೂ ಸಂದೇಶಗಳನ್ನು ಸಾರುವ ಪೌರಾಣಿಕ ನಾಟಕಗಳು ಪೂರ್ವಜರ ಕೊಡುಗೆಗಳಾಗಿವೆ ಎಂದು ತಿಳಿಸಿದರು.ಒಂದು ಕಾಲದಲ್ಲಿ ಪೌರಾಣಿಕ ನಾಟಕಗಳು ಗ್ರಾಮಿಣ ಭಾಗದ ಜನರಿಗೆ ಮನರಂಜನೆಯ ಬಹುಮುಖ್ಯ ಮಾಧ್ಯಮಗಳಾಗಿದ್ದವು. ನಾಟಕಗಳ ಮೂಲಕ ನಮ್ಮ ಹಿರಿಯರು ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ ಅವರಿಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು. ಪುರಾಣದ ಪಾತ್ರಗಳ ಮೂಲಕ ಬದುಕಿನ ಆದರ್ಶಗಳನ್ನು ಮಕ್ಕಳ ಮನಸ್ಸಿಗೆ ತುಂಬಿಸುತ್ತಾ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದರು. ಇಂದು ಮೊಬೈಲ್ ಸಂಸ್ಕೃತಿ ಎಲ್ಲವನ್ನೂ ಮರೆಮಾಚುತ್ತಿದೆ ಎಂದು ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ, ಟ್ರಸ್ಟ್ ಮೂಲಕ ಕಳೆದ 20 ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ತಿಂಗಳ ಕಲಾ ಬೆಳಕು ಕಾರ್ಯಕ್ರಮದ ಮೂಲಕ ಕಲಾವಿದರನ್ನು ಗುರುತಿಸುವ ಜೊತೆಗೆ ಅವರಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.ನಾಡಪ್ರಭು ಕೆಂಪೇಗೌಡ ಕಲಾ ಬಳಗದ ಗೌರವಾಧ್ಯಕ್ಷ ಶಂಭೂಗೌಡ, ರಂಗಭೂಮಿ ಕಲಾವಿದರಾದ ಅಬ್ದುಲ್ ಸಮದ್, ಸಂಪತ್ ಕುಮಾರ್, ತಬಲವಾದಕರಾದ ಮಹದೇವಚಾರ್, ಆದರ್ಶ ಸಿಂ.ಲಿಂ. ನಾಗರಾಜು, ಶಿಕ್ಷಕ ರಾಜಶೇಖರ್, ಗಾಯಕ ಮಹದೇವ್ ಉಪಸ್ಥಿತರಿದ್ದರು.