ಕನ್ನಡಪ್ರಭ ವಾರ್ತೆ ಗುಬ್ಬಿ
ಶಿಕ್ಷಣವೇ ಪ್ರಗತಿಯ ಮೂಲ ಸೂತ್ರ. ಬಡತನವು ಯಾವುದೇ ಮಗುವಿನ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಧ್ಯೇಯದೊಂದಿಗೆ ನೆರಳು ಜನಸೇವಾ ಟ್ರಸ್ಟ್ ನಿರಂತರವಾಗಿ ಇಂತಹ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಅಧ್ಯಕ್ಷ ಜಗದೀಶ್ ತಿಳಿಸಿದರು.ತಾಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೆರಳು ಜನಸೇವಾ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್, ಕಲಿಕಾ ಸಾಮಗ್ರಿಗಳು ಹಾಗೂ ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನಿರಂತರವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ನಮ್ಮ ಟ್ರಸ್ಟ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಸಮಾಜದ ಆಸ್ತಿಯಾಗಬೇಕು ಎಂದು ತಿಳಿಸಿದರು.ಇಡಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶುಶಾಂತ್ ಗೌಡ ಮಾತನಾಡಿ, ನೆರಳು ಜನಸೇವಾ ಟ್ರಸ್ಟ್ ಪ್ರಾರಂಭದಿಂದ ಇಲ್ಲಿಯವರೆಗೆ ಪ್ರತಿ ವರ್ಷ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ. ಇನ್ನೂ ಹೆಚ್ಚಿನ ಸಮಾಜಸೇವೆ ಮಾಡುವ ಶಕ್ತಿಯನ್ನು ಟ್ರಸ್ಟ್ ಪಡೆದುಕೊಳ್ಳಲಿ ಎಂದು ಆಶಿಸಿದರು. ಮುಖ್ಯ ಶಿಕ್ಷಕಿ ಬಿ.ಎಚ್.ಗಂಗಮ್ಮ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಲವು ರೀತಿಯ ಸಮಸ್ಯೆಗಳು ಇರುತ್ತವೆ. ಅವುಗಳನ್ನು ನಿವಾರಣೆ ಮಾಡಲು ಇಂತಹ ಟ್ರಸ್ಟ್ ಹಾಗೂ ಸ್ಥಳೀಯ ಮುಖಂಡರುಗಳ ಸಹಭಾಗಿತ್ವ ಅತ್ಯಗತ್ಯ. ಇಂತಹ ಕೆಲಸವನ್ನು ಈ ಗ್ರಾಮದ ನೆರಳು ಜನ ಸೇವಾ ಟ್ರಸ್ಟ್ ಹಾಗೂ ಹಳೆ ವಿದ್ಯಾರ್ಥಿ ಸಂಘ ಕ್ರಿಯಾಶೀಲವಾಗಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇವರಿಗೆ ನಮ್ಮ ಶಾಲೆ ಆಭಾರಿಯಾಗಿರುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತವಾಗಿ ಬ್ಯಾಕ್ ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ನಾಗರಾಜು, ನವಾಜ್, ಪ್ರದೀಪ್, ಮಧು, ಸಂತೋಷ್, ರುದ್ರೇಶ್, ಪ್ರಕಾಶ್, ಶಭಾಷ್, ಪ್ರವೀಣ್, ಕೆಂಪರಾಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್, ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲಕೃಷ್ಣ, ಸಿ ಆರ್ ಪಿ ಶೀಲಾ, ಶಿಕ್ಷಕಿಯರಾದ ಚಂದ್ರಕಲಾ, ಇಂದ್ರಮ್ಮ, ರೇಣುಕಮ್ಮ, ಕಾಂತರಾಜು, ವಿಜಯ್ ಕುಮಾರ್, ಕುಮಾರ್, ಶಶಿಕುಮಾರ್, ಶ್ಯಾಮಲ, ಕುಮುದ, ಅಂಬುಜ ಹಾಗೂ ಟ್ರಸ್ಟ್ ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಇತರರು ಇದ್ದರು.