ಈಗ ಮೊಟ್ಟೆ ಬೆಲೆ ಅಧಿ ಕವಾಗಿದ್ದು, ಹೋಲ್‌ಸೇಲ್ ಅಂಗಡಿಗಳಲ್ಲಿ ಮೊಟ್ಟೆ ಒಂದಕ್ಕೆ 6.80ರಿಂದ 7 ರೂಗಳಿಗೆ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ 7.50 ರೂನಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸರಕಾರ ಮೊಟ್ಟೆಗೆ ನೀಡುತ್ತಿರುವ 6 ರೂ. ಜತೆಗೆ ಶಿಕ್ಷಕರು ಹೆಚ್ಚುವರಿಯಾಗಿ 1 ರೂ ಅನ್ನು ಕೈಯಿಂದ ಭರಿಸಬೇಕಾದ ಅನಿವಾರ್ಯ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪೌಷ್ಟಿಕಾಂಶ ವೃದ್ಧಿಗಾಗಿ ನೀಡುತ್ತಿರುವ ಕೋಳಿ ಮೊಟ್ಟೆ ಬೆಲೆ ಅಧಿಕವಾಗಿದ್ದು, ಶಾಲಾ ಶಿಕ್ಷಕರ ಜೇಬಿಗೆ ಕತ್ತರಿ ಬೀಳುವಂತಾಗಿದ್ದು ಚಳಿಗಾಲದ ಅಧಿವೇಶದಲ್ಲಿ ಮೊಟ್ಟೆ ದರ ಪರಿಷ್ಕರಣೆಯನ್ನು ಸರ್ಕಾರ ಮಾಡಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ.ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಹಾಜರಾತಿ ಹೆಚ್ಚಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದೆ. ಇದರಲ್ಲಿ ಬಹಳ ಪ್ರಮುಖವಾಗಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಹಳ ಪರಿಣಾಮಕಾರಿಯಾಗಿದೆ.ಮೊಟ್ಟೆ ತಿನ್ನದವರಿಗೆ ಬಾಳೇಹಣ್ಣು
ಮಧ್ಯಾಹ್ನದ ಬಿಸಿಯೂಟದ ಜತೆಗೆ ಈ ಹಿಂದೆ 1ರಿಂದ 10ನೇ ತರಗತಿವರೆಗೂ ವಾರಕ್ಕೆ ಎರಡು ದಿನಗಳ ಕಾಲ ಮೊಟ್ಟೆ ನೀಡುವ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆ ವೃದ್ಧಿಗಾಗಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿತ್ತು. ಯಾರು ಮೊಟ್ಟೆ ಸೇವಿಸುವುದಿಲ್ಲವೋ ಅವರಿಗೆ ಬಾಳೆಹಣ್ಣು ಅಥವಾ ಚಿಕ್ಕಿಯನ್ನು ಸೇವಿಸಲು ಅವಕಾಶ ಕಲ್ಪಿಸಿ ಅನುದಾನ ಬಿಡುಗಡೆ ಮಾಡಿತ್ತು. ಇದರಿಂದ ಮಕ್ಕಳ ಹಾಜರಾತಿ ಜತೆಗೆ ಪೌಷ್ಟಿಕ ಆಹಾರ ಸೇವಿಸಲು ಉತ್ತಮ ಅವಕಾಶ ಒದಗಿಸಲಾಗಿದೆ.2024ರ ಸೆಪ್ಟೆಂಬರ್ ತಿಂಗಳಿಂದ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಕಾರದೊಂದಿಗೆ ವಾರದ ಎರಡು ದಿನದ ಬದಲಾಗಿ ವಾರಕ್ಕೆ 6 ದಿನ ಮೊಟ್ಟೆ ವಿತರಣೆಗೆ ಸರ್ಕಾರ ಮುಂದಾಯಿತು. ಇದರೊಟ್ಟಿಗೆ ಈ ಹಿಂದೆ ನೀಡುತ್ತಿದ್ದ ಚಿಕ್ಕಿಯನ್ನು ರದ್ದು ಮಾಡಿ, ಮೊಟ್ಟೆ ಅಥವಾ ಬಾಳೆ ಹಣ್ಣು ಸೇವನೆಯ ಆಯ್ಕೆಯನ್ನು ಮಕ್ಕಳಿಗೆ ನೀಡಲಾಗಿತ್ತು.ಮೊಟ್ಟೆ, ಹಣ್ಣು ಖರೀದಿಗೆ ದರ ನಿಗದಿ
ಈ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದರೂ ಶಿಕ್ಷಕರಿಗೆ ಸ್ವಲ್ಪ ಮಟ್ಟಿಗೆ ಕೆಲಸ ಹೆಚ್ಚುವರಿಯಾಯಿತು. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚು ಮಾಡುವಲ್ಲಿ ಸರ್ಕಾರ ಮಾಡಿರುವ ಉದ್ದೇಶ ಒಳ್ಳೆಯದೇ ಆದರೆ ಅದನ್ನು ಜಾರಿ ಮಾಡಿರುವ ವಿಧಾನ ಶಿಕ್ಷಕರಲ್ಲಿ ಸ್ವಲ್ಪಮಟ್ಟಿಗೆ ಅಸಮಾಧಾನವೂ ಉಂಟಾಗಿದೆ. ಸರ್ಕಾರ ಪ್ರತಿ ಬಾಳೆ ಹಣ್ಣು ಖರೀದಿಗೆ 6 ರು.ಗಳು, ಮೊಟ್ಟೆಗೆ 6 ರು.ಗಳಂತೆ ನೀಡುತ್ತಿದ್ದು, ಮೊಟ್ಟೆ ಬೇಯಿಸಲು ಗ್ಯಾಸ್ ವೆಚ್ಚ, ಸಾಗಾಣಿಕೆ ಮತ್ತು ಮೊಟ್ಟೆ ಸುಲಿಯುವವರಿಗೆ 1 ರೂ.ನಂತೆ ವಿಂಗಡಣೆ ಮಾಡಲಾಗುತ್ತಿದೆ.ಶಿಕ್ಷಕರಿಗೆ ಹೊರೆಯಾದ ಯೋಜನೆ
ಆದರೆ ಈಗ ಮೊಟ್ಟೆ ಬೆಲೆ ಅಧಿ ಕವಾಗಿದ್ದು, ಹೋಲ್‌ಸೇಲ್ ಅಂಗಡಿಗಳಲ್ಲಿ ಮೊಟ್ಟೆ ಒಂದಕ್ಕೆ 6.80ರಿಂದ 7 ರೂಗಳಿಗೆ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ 7.50 ರೂನಂತೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸರಕಾರ ಮೊಟ್ಟೆಗೆ ನೀಡುತ್ತಿರುವ 6 ರೂ. ಜತೆಗೆ ಶಿಕ್ಷಕರು ಹೆಚ್ಚುವರಿಯಾಗಿ 1 ರೂ ಅನ್ನು ಕೈಯಿಂದ ಭರಿಸಬೇಕಾದ ಅನಿವಾರ್ಯ ಎದುರಾಗಿದೆ. ಶಿಕ್ಷಕರು ಹೋಲ್‌ಸೇಲ್ ದರದಲ್ಲಿ ದೂರದ ಪಟ್ಟಣ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ತರುವಾಗ ಮಾರ್ಗಮಧ್ಯೆ ಒಡೆದು ಹೋದರೆ ಅದರ ವೆಚ್ಚವನ್ನು ಶಿಕ್ಷಕರೇ ಭರಿಸಬೇಕು.ಮೊಟ್ಟೆ ದರ ಪರಿಷ್ಕರಿಸಲಿ
ಮಕ್ಕಳಿಗೆ ಪಾಠ ಮಾಡುವ ಜತೆಗೆ ಹೆಚ್ಚುವರಿಯಾಗಿ ಮೊಟ್ಟೆ ವಿತರಣೆಯ ಕಾಯಕವನ್ನೂ ಶಿಕ್ಷಕರ ಹೆಗಲಿಗೆ ಹೇರಲಾಗಿದೆ. ಈ ಮೊಟ್ಟೆ ಮತ್ತು ಬಾಳೇಹಣ್ಣಿನ ದರ ಹೆಚ್ಚಾಗಿರುವ ಕಾರಣ ಇವುಗಳನ್ನು ಖರೀದಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಕೆಲವು ಶಿಕ್ಷಕರಂತೂ ಬಿಸಿಯೂಟದ ಜವಾಬ್ದಾರಿಯೇ ಬೇಡ ಎಂದು ಬೇರೆ ಶಿಕ್ಷಕರಿಗೆ ಹಸ್ತಾಂತರ ಮಾಡುತ್ತಿರುವ ಘಟನೆಗಳೂ ನಡೆಯುತ್ತಿದೆ. ಬಿಸಿಯೂಟದ ಜತೆಗೆ ಮೊಟ್ಟೆ ವಿತರಣೆ ಸರಾಗವಾಗಿ ನಡೆಯಬೇಕಾದರೆ ಮೊಟ್ಟೆ ಬೆಲೆಯ ಪರಿಷ್ಕರಣೆಯನ್ನು ಸರ್ಕಾರ ಮಾಡಬೇಕು ಎಂಬುದು ಶಿಕ್ಷಕರ ವಾದವಾಗಿದೆ.