80 ಮೀರಿದ ವಯೋಮಾನದ ಗುರುಗಳು ಹಾಗೂ 50 ವರ್ಷ ದಾಟಿದ ಶಿಷ್ಯರು ಸಮಾಗಮಗೊಂಡ ವಿಶೇಷ ಕಾರ್ಯಕ್ರಮ ಕೊರಟಗೆರೆ ತಾಲೂಕು ತೋವಿನಕೆರೆಯ ಶ್ರೀ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

80 ಮೀರಿದ ವಯೋಮಾನದ ಗುರುಗಳು ಹಾಗೂ 50 ವರ್ಷ ದಾಟಿದ ಶಿಷ್ಯರು ಸಮಾಗಮಗೊಂಡ ವಿಶೇಷ ಕಾರ್ಯಕ್ರಮ ಕೊರಟಗೆರೆ ತಾಲೂಕು ತೋವಿನಕೆರೆಯ ಶ್ರೀ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ನಡೆಯಿತು.

40 ವರ್ಷಗಳ ದೀರ್ಘ ಕಾಲದ ನಂತರ ಗುರು-ಶಿಷ್ಯರು ಮುಖಾಮುಖಿಯಾಗಿ ಸಂಭ್ರಮಿಸಿದರು.

1985 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಓದಿದ ವಿದ್ಯಾರ್ಥಿಗಳು, ಆಗ ತಮಗೆ ಪಾಠ ಹೇಳಿದ ಗುರುಗಳನ್ನು ಕರೆತಂದು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಂದನೆ ಸಲ್ಲಿಸಿ ಗೌರವಿಸಿದರು.

ಪ್ರೌಢಶಾಲೆಯಲ್ಲಿ ಜೊತೆಯಾಗಿ ಓದಿದ್ದ ಗೆಳೆಯ, ಗೆಳತಿಯರು ನಂತರ ಕಾಲೇಜು, ಉದ್ಯೋಗ, ವ್ಯವಹಾರ ನಿಮಿತ್ತ ಒಂದೊಂದು ಊರಿನಲ್ಲಿ ನೆಲೆಸಿದ್ದರು. ಬಹುತೇಕರಿಗೆ ಒಬ್ಬರಿಗೊಬ್ಬರು ಸಂಪರ್ಕವಿಲ್ಲದಂತಾಗಿತ್ತು. ಆಗಿನ ಎಲ್ಲಾ ಹಳೆ ಗೆಳೆಯರನ್ನು ಒಟ್ಟಾಗಿ ಸೇರಿಸಬೇಕು. ಶಾಲೆಯಲ್ಲಿ ಬೋಧಿಸಿದ ಶಿಕ್ಷಕರನ್ನು ಕರೆತಂದು ಗೌರವಿಸಬೇಕು, ಶಾಲಾ ದಿನಗಳ ನೆನಪನ್ನು ಪರಸ್ಪರ ಮೆಲುಕು ಹಾಕಬೇಕು ಎಂದು 85ರ ಸಾಲಿನ ವಿದ್ಯಾರ್ಥಿಗಳಾದ ಶ್ರೀನಾಥ್, ರಾಮೇಶ್ವರ, ಲಕ್ಷ್ಮಿಕಾಂತ್, ಟಿ.ಆರ್.ನಾಗರತ್ನ, ಎಂ.ಆಶಾಲತಾ, ಇಂದ್ರಜಾ, ಶ್ರೀರಂಗಯ್ಯ ಮೊದಲಾದವರು ಆಸಕ್ತಿವಹಿಸಿದರು. ಅದರ ಫಲವಾಗಿ 40 ವರ್ಷಗಳ ನಂತರ ತಮ್ಮ ಹೈಸ್ಕೂಲ್ ದಿನಗಳ ಗುರು-ಶಿಷ್ಯರ ಸಮಾಗಮ ಸಾಧ್ಯವಾಯಿತು.

ಆಗ ಶಾಲೆಯಲ್ಲಿ ತಮಗೆ ಬೋಧಿಸಿದ ಶಿಕ್ಷಕರುಗಳೂ ಒಂದೊಂದು ಊರಿನಲ್ಲಿದ್ದರು. ಶಾಲಾ ನಂತರ ಅವರ ಭೇಟಿಗೂ ಅವಕಾಶ ದೊರೆತಿರಲಿಲ್ಲ. ಆ ಶಿಕ್ಷಕರನ್ನು ಕರೆತಂದು ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ರೂಪಿಸಿದರು. ಆ ಶಿಕ್ಷಕರಲ್ಲಿ ಕೆಲವರು ಅಗಲಿಹೋಗಿದ್ದಾರೆ, ಕೆಲವರು ಯಾವುದೋ ಊರಿನಲ್ಲಿ ವಿಶ್ರಾಂತಿ ಜೀವನ ಸಾಗಿಸುತ್ತಿದ್ದಾರೆ. ಆ ಶಿಕ್ಷಕರನ್ನು ಭೇಟಿ ಮಾಡಿದ ಹಳೆ ವಿದ್ಯಾರ್ಥಿಗಳ ತಂಡ ಗುರುವಂದನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಕೆಲವು ಶಿಕ್ಷಕರು ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬರಲು ಸಾಧ್ಯವಿಲ್ಲ ಎಂದರು. ಕಡೆಗೆ ಶಿಷ್ಯರ ಪ್ರೀತಿ, ಅಭಿಮಾನಕ್ಕೆ ಕಟ್ಟುಬಿದ್ದು ಒಪ್ಪಿ ಆಗಮಿಸಿದ್ದರು. ಗುರುಗಳಿಗೆ ಕೆಲವು ಶಿಷ್ಯರ ಗುರುತೇ ಮರೆತುಹೋಗಿತ್ತು, ಶಾಲಾ ದಿನಗಳ ಘಟನೆಗಳನ್ನು ನೆನಪು ಮಾಡಿಕೊಡುವ ಮೂಲಕ ಶಿಷ್ಯರು ತಮ್ಮನ್ನು ಸ್ವಯಂ ಪರಿಚಯಿಸಿಕೊಂಡರು.

ನಗರದ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಗಿನ ಶಿಕ್ಷಕರಾದ ಕೆ.ಪಿ.ರಾಜಣ್ಣ, ಆರ್.ತಿಮ್ಮಯ್ಯ, ಪಿ.ದೊಡ್ಡಸಿದ್ಧಯ್ಯ, ಡಿ.ಆರ್.ಈರಯ್ಯ, ಡಿ.ಆರ್.ಪ್ರೇಮಕುಮಾರಿ, ಎಂ.ವಿ.ತಿಮ್ಮಯ್ಯ, ವಿ.ಜಿ.ವೇಣುಗೋಪಾಲ್, ಪಿ.ರಾಮಕೃಷ್ಣಯ್ಯ ಅವರನ್ನು ಶಿಷ್ಯರು ಸನ್ಮಾನಿಸಿ ಗೌರವಿಸಿ ಗುರುವಂದನೆ ಸಲ್ಲಿಸಿದರು. ಶಿಷ್ಯರಲ್ಲಿ ಹಲವರು ಮದುವೆಯಾಗಿ ಮಕ್ಕಳು, ಮೊಮ್ಮಕ್ಕಳನ್ನು ಕಂಡಿದ್ದಾರೆ. ಅವರಲ್ಲಿ ಕೆಲವರು ಕುಟುಂಬದ ಸದಸ್ಯರೊಂದಿಗೆ ಬಂದು ಗುರುವಂದನೆ ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದರು.