ಸಂಸ್ಕಾರಯುತ ಪಾಠಕ್ಕೆ ಹಿರಿಯರ ಪಾದಪೂಜೆ ಮುನ್ನುಡಿ

| Published : Nov 21 2025, 02:45 AM IST

ಸಾರಾಂಶ

ಮೊಬೈಲ್, ಟಿವಿ ರಾರಾಜಿಸುತ್ತಿರುವ ಈ ದಿನಮಾನಗಳಲ್ಲಿ ಮಕ್ಕಳು ಸಂಸ್ಕಾರ, ನೈತಿಕತೆಗಳಿಂದ ದೂರ ಉಳಿಯುವಂತಾಗಿದೆ.

ನವಲಗುಂದ:

ಮಕ್ಕಳಿಗೆ ಶಾಲೆಗಳಲ್ಲಿ ಸಂಸ್ಕಾರಯುತ ಪಾಠಕ್ಕೆ ಅಜ್ಜ, ಅಜ್ಜಿಯರ ಪಾದಪೂಜೆ ಕಾರ್ಯಕ್ರಮ ಮುನ್ನುಡಿಯಾಗಿದೆ ಎಂದು ನಿವೃತ್ತ ಶಿಕ್ಷಕ ಪಂಚಾಕ್ಷರಯ್ಯ ಹಿರೇಮಠ ಹೇಳಿದರು.

ತಾಲೂಕಿನ ನಾಗನೂರು ಗ್ರಾಮದ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಅಜ್ಜ, ಅಜ್ಜಿಯರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಮನೆಯೇ ಮೊದಲ ಪಾಠವಾಗಿದ್ದರೂ ಒತ್ತಡದ ಜೀವನದಲ್ಲಿ ಸಂಸ್ಕಾರ ಪಾಲನೆಗೆ ಆದ್ಯತೆ ದೊರಕುತ್ತಿಲ್ಲ. ಹೀಗಾಗಿ ಶಾಲೆಯ ಆವರಣದಲ್ಲಿಯೇ ಮಕ್ಕಳಿಗೆ ಹಿರಿಯರ ಜತೆ ನಡೆದುಕೊಳ್ಳುವ ಸಂಸ್ಕಾರವನ್ನು ರೂಪಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ನಿವೃತ್ತ ಶಿಕ್ಷಕ ವೈ.ಎಸ್. ಬೆಣ್ಣಿ ಮಾತನಾಡಿ, ಮೊಬೈಲ್, ಟಿವಿ ರಾರಾಜಿಸುತ್ತಿರುವ ಈ ದಿನಮಾನಗಳಲ್ಲಿ ಮಕ್ಕಳು ಸಂಸ್ಕಾರ, ನೈತಿಕತೆಗಳಿಂದ ದೂರ ಉಳಿಯುವಂತಾಗಿರುವುದು ಬೇಸರದ ಸಂಗತಿ. ಪ್ರತಿಯೊಬ್ಬರೂ ಮೌಲ್ಯಯುತ ಜೀವನ ನಡೆಸಲು ಉತ್ತಮ ನಡೆ, ನುಡಿಗಳು ಅವಶ್ಯಕವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಪುಷ್ಪಾ ಹಿರೇಮಠ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳು ಅಜ್ಜ, ಅಜ್ಜಿಯಂದಿರಿಗೆ ಪಾದಪೂಜೆ ಮಾಡಿದರು.

ಈ ವೇಳೆ ಡಾ. ಅಬ್ದುಲ್ ಕಲಾಂ ಅಭಿಮಾನಿಗಳ ಸಂಘದ ಅಧ್ಯಕ್ಷ ರಿಯಾಜ್ ನಾಶಿಪುಡಿ, ಗಂಗಮ್ಮ ಹಿರೇಮಠ, ಅಡಿವೆಯ್ಯ ಹಿರೇಮಠ, ಶಶಿಕಲಾ ಹಿರೇಮಠ, ಶಿವು ಹಿರೇಮಠ, ಶ್ರೀಶೈಲಯ್ಯ ಹಿರೇಮಠ, ಪಾಲಕರು ಸೇರಿದಂತೆ ಅಜ್ಜ, ಅಜ್ಜಿಯರು ಉಪಸ್ಥಿತರಿದ್ದರು.